ಜ.7ರಂದು ‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕೃತಿ ಬಿಡುಗಡೆ

ಉಡುಪಿ, ಜ.2: ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ.ಅನಿಲ್ ಕುಮಾರ್ ಅವರು ಕ್ಷೇತ್ರ ಸಮೀಕ್ಷೆ ಮಾಡಿ ರಚಿಸಿದ ‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಕೃತಿ ಇದೇ ಜ.7ರಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಡಾ.ಅನಿಲ್‌ಕುಮಾರ್ ಅವರು ಈ ವಿಷಯ ತಿಳಿಸಿದರು. ತನಗೆ ಪಿಎಚ್‌ಡಿಗೆ ಮಾರ್ಗದರ್ಶನಕರಾಗಿದ್ದ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕ್ಷೇತ್ರ ಕಾರ್ಯದ ಸಮೀಕ್ಷೆಯ ಮೂಲಕ ಉಡುಪಿ ಜಿಲ್ಲಾ ಬರಹಗಾರರ ಕೋಶವನ್ನು ಸಿದ್ಧಪಡಿಸುವಂತೆ ನೀಡಿದ ಸಲಹೆಯಂತೆ 2018ರಿಂದ ಕ್ಷೇತ್ರಕಾರ್ಯ ನಡೆಸಿ ಈ ಕೃತಿ ರಚಿಸಿರುವುದಾಗಿ ಅವರು ತಿಳಿಸಿದರು.
ತನ್ನ ಕೃತಿಯಲ್ಲಿ 1870ರಲ್ಲಿ ಮುದ್ದಣನಿಂದ ಪ್ರಾರಂಭಿಸಿ 2019ರಲ್ಲಿ ಪೇಜಾವರಶ್ರೀಗಳ ನಿಧನದವರೆಗೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1427 ಮಂದಿ ಬರಹಗಾರರನ್ನು ಗುರುತಿಸಿ ಅವರ ಸಮಗ್ರ ವಿವರಗಳನ್ನು ಸಂಗ್ರಹಿಸಿ ವಿವರಗಳನ್ನು ಕೃತಿಯಲ್ಲಿ ನೀಡಿದ್ದೇನೆ ಎಂದರು.
ಜಿಲ್ಲೆಯ ಬರಹಗಾರರಿಗಾಗಿ ನಡೆಸಿದ ಶೋಧ ಕಾರ್ಯದ ಸಂದರ್ಭದಲ್ಲಿ ತನಗೆ ಜಿಲ್ಲೆಯ ಬಗ್ಗೆ ಅನೇಕ ಮಾಹಿತಿಗಳು, ಹೊಸ ಸತ್ಯಗಳು ತಿಳಿದುಬಂದಿದ್ದು, ಅವುಗಳನ್ನು 900 ಪುಟಗಳ ಕೃತಿಯ ಸುಧೀರ್ಘ ಮುನ್ನುಡಿಯಲ್ಲಿ ವಿವರಿಸಿದ್ದೇನೆ ಎಂದರು.
ಕೃತಿಯನ್ನು ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಸುಬ್ಬಣ್ಣ ರೈ ಬಿಡುಗಡೆಗೊಳಿಸಲಿದ್ದಾರೆ. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಪಾದೇಕಲ್ಲು ವಿಷ್ಣು ಭಟ್ಟ ಕೃತಿಯನ್ನು ಪರಿಚಯಿ ಸಲಿದ್ದಾರೆ. ಎಂಜಿಎಂ ಕಾಲೇಜಿನ ಪ್ರಾಂಶುಪಾಲ್ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ರವೀಂದ್ರ ರೈ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಬಳಿಕ ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಒಟ್ಟು ಐದು ವಿಚಾರಗೋಷ್ಠಿಗಳು ನಡೆಯಲಿವೆ. ಸಂಜೆ 4:00ಗಂಟೆಗೆ ಸಮಾರೋಪ ಸಮಾರಂಭವು ನಾಡೋಜ ಕೆ.ಪಿ.ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಯು. ಸೀತಾರಾಮ ಶೆಟ್ಟಿ ಹಾಗೂ ಕೆರಾಡಿ ಚಂದ್ರಶೇಖರ ಶೆಟ್ಟಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಲವರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃತಿಯ ಪ್ರಕಾಶನ ಸಂಸ್ಥೆ ಬೆಂಗಳೂರಿನ ಬಾಲಾಜಿ ಪ್ರಕಾಶನದ ಉದಯ ಶೆಟ್ಟಿ, ನಾರಾಯಣ ಬಲ್ಲಾಳ್, ಕೋಟ ಶ್ರೀಕೃಷ್ಣ ಅನಿತಾನಲ, ನಾರಾಯಣ ಬಲ್ಲಾಳ್ ಉಪಸ್ಥಿತರಿದ್ದರು.







