8ನೇ ದಿನಕ್ಕೆ ಕಾಲಿರಿಸಿದ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹ
ಕಾಂಗ್ರೆಸ್ ಮುಖಂಡರ ಭೇಟಿ: ಜು.30ರಂದು ಸ್ಪೀಕರ್ ಭೇಟಿಯ ಭರವಸೆ

ಉಡುಪಿ: ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂ ರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಏಳನೇ ದಿನವಾದ ರವಿವಾರವೂ ಮುಂದುವರೆದಿದೆ.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಧರಣಿಯ ಸ್ಥಳಕ್ಕೆ ಆಗಮಿಸಿ, ಧರಣಿನಿರತರಿಂದ ಮನವಿ ಸ್ವೀಕರಿಸಿದರು. ಸಂಬಂಧಪಟ್ಟ ಸರಾಕರಿ ಅಧಿಕಾರಿಗಳಿಗೆ ಸ್ಥಳದಿಂದ ಕರೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ ಅವರು, ಮುಖ್ಯಮಂತ್ರಿ ಬಳಿ ಒಕ್ಕೂಟದ ನಿಯೋಗವನ್ನು ಕರೆದುಕೊಂಡು ಹೋಗುವ ಭರವಸೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಅಧ್ಯಕ್ಷೆ ಸುಶೀಲಾ ನಾಡ, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಿದ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಜೊತೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡುವವರೆಗೆ ಈ ಹೋರಾಟ ಕೈಬಿಡುವುದಿಲ್ಲ. ಇಲ್ಲದಿದ್ದರೆ ನಮ್ಮ ಸಮಸ್ಯೆಗಳ ಬಗ್ಗೆ ಅರಿವು ಇರುವ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅವರೂ ಸ್ಥಳಕ್ಕೆ ಬಂದು ಭರವಸೆ ನೀಡಿದರೆ ಸಾಕಾಗುತ್ತದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ವಿನಯ ಕುಮಾರ್ ಸೊರಕೆ, ಜು.30ರಂದು ಸಭಾಪತಿ ಯು.ಟಿ.ಖಾದರ್ ಅವರನ್ನು ಇಲ್ಲಿಗೆ ಕರೆಸಿ ನಿಮ್ಮನ್ನು ಭೇಟಿ ಮಾಡಿಸಲಾಗು ವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಕೊಡವೂರು, ಪ್ರಸಾದ್ ಕಾಂಚನ್, ವೆರೋನಿಕಾ ಕಾರ್ನೆಲಿಯೋ, ರಮೇಶ್ ಕಾಂಚನ್, ಸುನೀತಾ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಹರೀಶ್ ಕಿಣಿ, ರೋಯ್ಸ್ ಉದ್ಯಾವರ, ರೋಶನಿ ಒಲಿವೆರಾ, ಸಂತೋಷ್ ಕುಲಾಲ್, ಸಂಧ್ಯಾ ತಿಲಕ್, ಮೀನಾಕ್ಷಿ ಮಾಧವ, ಕೊರಗ ಸಂಘಗಳ ಒಕ್ಕೂಟದ ಮುಖಂಡರಾದ ವಿನಯ ಅಡ್ವೆ, ದಿವಾಕರ ಕಳ್ತೂರು, ಪವಿತ್ರಾ ಮಧುವನ, ಬೋಗ್ರ ಕೊಕ್ಕರ್ಣೆ, ಹೆಬ್ರಿ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.







