ಸೆ.8ರಂದು ಕ್ರೈಸ್ತರ ಮೊಂತಿ ಫೆಸ್ತ್‌ಗೆ ರಜೆ ನೀಡುವಂತೆ ಸಿಎಂಗೆ ಮನವಿ

ಉಡುಪಿ, ಆ.26: ಸೆ.8ರಂದು ಕರಾವಳಿ ಭಾಗದ ಕ್ರೈಸ್ತ ಬಾಂಧ್ಯರವರು ತೆನೆ ಹಬ್ಬ ಆಚರಿಸುವ ಸಂದರ್ಭದಲ್ಲಿ ಸರಕಾರಿ ರಜೆ ಘೋಷಣೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಕಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶದ ಪದಾಧಿಕಾರಿ ಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇತ್ತೀಚಿನ ಕೆಲವು ವರ್ಷಗಳಿಂದ ಈ ಹಬ್ಬಕ್ಕೆ ರಾಜ್ಯ ಸರ್ಕಾರವು ನಿರ್ಬಂಧಿತ ರಜೆ ಎಂದು ಪರಿಗಣಿಸಿದೆ. ಇದು ಕೇವಲ ಶಿಕ್ಷಕರಿಗೆ ಮಾತ್ರ ಸೀಮಿತವಾಗಿದೆ. ಆದರೆ ಕರಾವಳಿ ಭಾಗದಲ್ಲಿ ಈ ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸು ತ್ತಿದ್ದು, ನಾಡಹಬ್ಬ ರೀತಿಯಲ್ಲಿ ಆಚರಿಸ ಲಾಗುತ್ತದೆ. ಸುಮಾರು 8 ದಿನಗಳ ಕಾಲ ನೋವೆನಾ ವಿಶೇಷ ಪೂಜೆ ನಡೆಸಿ ಮರಿಯಮ್ಮ ಮಾತೆಗೆ ತೋಟದ ಹೂಗಳನ್ನು ಅಪರ್ಣೆ ಮಾಡಿ ಈ ಹಬ್ಬದ ವಿಶೇಷತೆಯ ಕಬ್ಬುಗಳನ್ನು ವಿತರಿಸುವುದು ವಿಶೇಷವಾಗಿದೆ.
ಸೆ.8ರಂದು ಮಂಗಳೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಧರ್ಮ ಪ್ರಾಂತ್ಯದಗಳಲ್ಲಿ ವಿವಿಧ ಪೂಜಾ ವಿಧಿಗಳು ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಸೆ.8ರಂದು ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಬೇಕು. ಇದು ಅಸಾಧ್ಯ ವಾದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಕ್ರೈಸ್ತ ಸಮುದಾಯ ದವರ ಬೇಡಿಕೆಯಾಗಿದೆ. ಆದುದರಿಂದ ಸೆ.8ರಂದು ಸರಕಾರಿ ರಜೆಯನ್ನಾಗಿ ಘೋಷಣೆ ಮಾಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.
ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಅಧ್ಯಕ್ಷ ಸಂತೋಷ್ ಡಿಸೋಜ, ರಾಜಕೀಯ ಸಂಚಾಲಕರಾದ ಸ್ಟ್ಯಾನಿ ಲೋಬೊ, ಉಡುಪಿ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಶಿರ್ವ, ಉಡುಪಿ ವಲಯ ಅಧ್ಯಕ್ಷ ಕಿರಣ್ ಲೂವಿಸ್ ಹಾಗೂ ಇತರರು ಉಪಸ್ಥಿತರಿದ್ದರು.






