ಫೆ.8ಕ್ಕೆ ಜಿಲ್ಲಾ ಕೃಷಿಕ ಸಂಘದಿಂದ ‘ರೈತ ಸಮಾವೇಶ-2025’

ಉಡುಪಿ, ಫೆ.4: ಉಡುಪಿ ಜಿಲ್ಲಾ ಕೃಷಿಕ ಸಂಘವು ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನವೂ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಫೆ.8ರ ಶನಿವಾರ ಒಂದು ದಿನದ ‘ರೈತ ಸಮಾವೇಶ- 2025’ನ್ನು ಉಡುಪಿ ಕುಂಜಿಬೆಟ್ಟಿನ ಶ್ರೀಶಾರದಾ ಮಂಟಪದಲ್ಲಿ ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಈಗಾಗಲೇ ಗ್ರಾಮ ಸಮಿತಿಗಳ ಮೂಲಕ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ಸಹಿತ ಕೃಷಿಕರಿಗೆ ಮಾಹಿತಿ, ಮಾರ್ಗದರ್ಶನ ಗಳನ್ನು ನೀಡುತ್ತಿರುವ ಕೃಷಿಕ ಸಂಘ ಇದೀಗ ಜಿಲ್ಲೆಯ ರೈತರಿಗೆ ಹಾಗೂ ಆಸಕ್ತರಿಗೆ ಒಂದು ಇಡೀ ದಿನ ಕೃಷಿಯ ಕುರಿತಂತೆ ಸಮಗ್ರ ಮಾಹಿತಿ ನೀಡಲಿದೆ ಎಂದರು.
ರೈತ ಸಮಾವೇಶವನ್ನು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಎಸ್.ನಾಗರಾಜ ಕೆದ್ಲಾಯ ಉದ್ಘಾಟಿಸಲದ್ದು, ರಾಮಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಬಡಗುಬೆಟ್ಟು ಕೋಆಪರೇಟಿವ್ ಸೊಸೈಟಿಯ ಜಯ ಕರ ಶೆಟ್ಟಿ ಇಂದ್ರಾಳಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಡುಇ ವಿಶ್ವನಾಥ ಶೆಣೈ, ಕರ್ಣಾಟಕ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ವಾದಿರಾಜ ಭಟ್, ಕಾಪು ಶ್ರೀಲಕ್ಷ್ಮೀಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್.ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.
ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ಮಾತನಾಡಿ, ಕೃಷಿ ಮಾಹಿತಿ, ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಕೃಷಿ ಸಲಕರಣೆಗಳು, ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕ ರಣಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳೂ ಇದ್ದು, ಸುಲಭ ಕೃಷಿಗಾಗಿ ರೈತರು ಇವುಗಳ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ಜಿಲ್ಲೆಯ ಕೃಷಿಕರಿಗಾಗಿ ಸಮಾವೇಶದಲ್ಲಿ ಮೂರು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕೃಷಿ ಇಲಾಖೆಯ ವಿವಿಧ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಅನುಭವಿ, ಪ್ರಗತಿಪರ ಕೃಷಿಕರು ಇಲ್ಲಿ ಆಧುನಿಕ ಕೃಷಿ, ಸಮಗ್ರ ಕೃಷಿ ಹಾಗೂ ಲಾಭ ದಾಯಕ ಕೃಷಿ, ಅಲ್ಲದೇ ಹೈನುಗಾರಿಕೆ, ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತಂತೆ ಮಾಹಿತಿಗಳೊಂದಿಗೆ ಆಸಕ್ತರ ಪ್ರಶ್ನೆಗಳಿಗೂ ಉತ್ತರಿಸಲಿದ್ದಾರೆ ಎಂದು ಕುದಿ ತಿಳಿಸಿದರು.
ವೈಜ್ಞಾನಿಕ ಅಡಿಕೆ ಬೇಸಾಯ, ಆರೋಗ್ಯ ನೆಮ್ಮದಿಗಾಗಿ ಕೃಷಿ, ಲಾಭದಾಯಕ ಕೃಷಿಗೆ ವಿವಿಧ ತಂತ್ರಜ್ಞಾನಗಳು, ಹೈನುಗಾರಿಕೆಯಲ್ಲಿ ಸವಾಲುಗಳು, ಭತ್ತದ ಇಳುವರಿ ಹೆಚ್ಚಿಸುವ ವಿಧಾನ, ಕೃಷಿ ಇಲಾಖೆಯಲ್ಲಿ ರೈತರಿಗಿರುವ ಸೌಲಭ್ಯ ಗಳು, ತೋಟಗಾರಿಕಾ ಇಲಾಖೆಯ ಸೌಲಭ್ಯಗಳು ಮುಂತಾದ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ಕಾರ್ಯ ಕ್ರಮಗಳಿ ರುತ್ತವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಶ್ರೀನಿವಾಸ ಆಚಾರ್ಯ ಬೈಲೂರು, ದಿನೇಶ್ ಶೆಟ್ಟಿ ಉಪಸ್ಥಿತ ರಿದ್ದರು.