10 ವರ್ಷಗಳಲ್ಲಿ ಭಾರತದಲ್ಲಿ ಮಹಿಳೆಯರ ಮೇಲಿನ ಹಿಂಸೆ ಶೇ.82ರಷ್ಟು ಹೆಚ್ಚಳ: ಪ್ರೊ. ಬಿಳಿಮಲೆ

ಉಡುಪಿ: ಮಹಿಳೆಯರ ಮೇಲಿನ ನಡೆಯುವ ಹಿಂಸೆಯಲ್ಲಿ ಜಗತ್ತಿನ 146 ದೇಶಗಳ ಪೈಕಿ ಭಾರತವು 135ನೇ ಸ್ಥಾನದಲ್ಲಿದೆ. 2011ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 228650 ಹಿಂಸಾ ವರದಿಗಳಾದರೆ, 2021ಕ್ಕೆ 428278 ವರದಿಯಾಗಿದೆ. ಅಂದರೆ ಕಳೆದ 10ವರ್ಷಗಳಲ್ಲಿ ಪುರುಷರು ಮಹಿಳೆಯರ ಮೇಲೆ ನಡೆಸುವ ಹಿಂಸೆಯ ಪ್ರಮಾಣ ಶೇ.82ರಷ್ಟು ಹೆಚ್ಚಾಗಿದೆ ಎಂದು ದೆಹಲಿ ಜವಾಹರ್ ಲಾಲ್ ನೆಹರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಂಶತಿ ವರ್ಷದ ಪ್ರಯುಕ್ತ ಕಾಲೇಜಿನ ಕನ್ನಡ ವಿಭಾಗ, ಉಡುಪಿ ಜಿಲ್ಲಾ ಲೇಖಕಿಯರ ಹಾಗೂ ವಾಚಕಿಯರ ಸಂಘದ ಸಹಯೋಗದೊಂದಿಗೆ ಶುಕ್ರವಾರ ಕಾಲೇಜಿನ ಯು.ಜಿ. ಎ.ವಿ.ಹಾಲ್‌ನಲ್ಲಿ ಆಯೋಜಿಸಲಾದ ಮಹಿಳೆ: ಸಮಕಾಲೀನ ತಲ್ಲಣಗಳು ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
2020-21ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಮಹಿಳೆಯರ ಮೇಲಿನ ಹಿಂಸೆ ಶೇ.15.3ರಷ್ಟು ಹಿಂಸೆ ಹೆಚ್ಚಾಗಿದೆ. ಸರಕಾರ ಹೇಳುವಂತೆ ಶೇ.86ರಷ್ಟು ಹಿಂಸೆ ಪ್ರಕರಣಗಳು ವರದಿಯಾಗುವುದೇ ಇಲ್ಲ. ಭಾರತದ ಶೇ.45ರಷ್ಟು ಮಹಿಳೆಯರು ತಮ್ಮ ಮೇಲೆ ಗಂಡಂದಿರು ನಡೆಸುವ ಹಿಂಸೆಯನ್ನು ಸಮರ್ಥಿಸಿ ಕೊಳ್ಳುತ್ತಾರೆ. ಇದು ಬಹಳ ಆತಂಕಕಾರಿಯಾಗಿದೆ ಎಂದರು.
2021ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 6589 ವರದಕ್ಷಿಣೆ ಸಾವುಗಳಾಗಿವೆ. ಅತೀ ಹೆಚ್ಚು ಶೇ.60ರಷ್ಟು ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿಯಾಗಿದೆ. ಕೆಳಜಾತಿಯ ಮಹಿಳಯರನ್ನು ದೇವರಿಗೆ ಬಲಿ ಕೊಡುವ ಪದ್ಧತಿ ಇಂದಿಗೂ ನಮ್ಮ ದೇಶದಲ್ಲಿ ಜಾಲ್ತಿಯಲ್ಲಿದೆ. 2000-19ರ ಮಧ್ಯೆ 90 ಲಕ್ಷ ಭ್ರೂಣ ಹತ್ಯೆಯಾಗಿದೆ. ಈ ರೀತಿ ಗರ್ಭಪಾತ ಮಾಡುವ ವೈದ್ಯರ ಪ್ರತಿವರ್ಷದ ಆದಾಯ ಒಂದು ಸಾವಿರ ಕೋಟಿ ರೂ. ಒಂದು ಕಡೆ ಗರ್ಭಪಾತ ಇನ್ನೊಂದು ಕಡೆ ವ್ಯಾಪಾರ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣಕ್ಕೆ ದೇಶಾದ್ಯಂತ ಬಹಳಷ್ಟು ಹೋರಾಟಗಳು ನಡೆದಿವೆ. ಆದರೂ ಅತ್ಯಾಚಾರ ಸಂಖ್ಯೆ ಕಡಿಮೆ ಆಗಿಲ್ಲ. ನಿರ್ಭಯ ಪ್ರಕರಣಕ್ಕೆ ಮೊದಲು 2012ರಲ್ಲಿ 143 ಅತ್ಯಾಚಾರ ಪ್ರಕರಣಗಳು ವರದಿಯಾದರೆ, ಆ ಪ್ರಕರಣದ ಬಳಿಕ 2013ರಲ್ಲಿ 359 ಅತ್ಯಾಚಾರ ಪ್ರಕರಣ ಗಳು ನಡೆದಿವೆ. 2011-21ರ ಮಧ್ಯೆ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆ ಪ್ರಮಾಣವು ಶೇ.26.3ರಷ್ಟು ಹೆಚ್ಚಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಭಾರತದ ಶೇ.7ರಷ್ಟು ಮಂದಿಯ ಕೈಯಲ್ಲಿ ಶೇ.54 ಭೂಮಿ ಇದೆ. ಇದರಲ್ಲಿ ಶೇ.78ರಷ್ಟು ಮಹಿಳೆಯರು ದುಡಿಯುತ್ತಿದ್ದಾರೆ. ಇವರಲ್ಲಿ ಶೇ.52 ರಷ್ಟು ಮಹಿಳೆಯರು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಅಂದರೆ ಕೃಷಿ ಯಾರದ್ದೋ, ಭೂಮಿ ಯಾರದ್ದೋ, ಕೆಲಸ ಮಾಡುವವರು ಯಾರೋ, ಸಾಯುವವರು ಯಾರೋ ಎಂಬಂತಾಗಿದೆ. ಯಾವುದಕ್ಕೂ ಹೊಂದಾಣಿಕೆಯೇ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಲಿಂಗದ ತಾರಮತ್ಯದ ಬಗ್ಗೆ ನಾವು ನಮ್ಮ ಅರಿವುಗಳನ್ನು ಹೆಚ್ಚು ಹೆಚ್ಚು ವೃದ್ಧಿಸಿಕೊಳ್ಳಬೇಕು. ಹೆಣ್ಣಾಗಿ ಹುಟ್ಟಿರುವ ಕಾರಣಕ್ಕೆ ಯಾರು ನನ್ನನ್ನು ಶೋಷಣೆ ಮಾಡಲು ಸಾಧ್ಯವಿಲ್ಲ. ರಾಜಕೀಯ, ಧಾರ್ಮಿಕ ಪ್ರಭಾವ ಬಂದರೂ ಲಿಂಗ ತಾರಮತ್ಯದ ಬಗ್ಗೆ ಅಂತರಂಗದಲ್ಲಿ ಧ್ವನಿಯಾಗಬೇಕು. ಇದರಲ್ಲಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯ ಪುರ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಆಶಯ ಭಾಷಣ ಮಾಡಿದರು. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅತಿಥಿಯಾಗಿದ್ದರು. ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ. ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಎಸ್. ವಹಿಸಿದ್ದರು. ಕಲಾನಿಕಾಯ ಡೀನ್ ಪ್ರೊ.ನಿಕೇತನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ರವಿರಾಜ್ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ತ್ರೀವೇಣಿ ಕಾರ್ಯಕ್ರಮ ನಿರೂಪಿಸಿದರು.
‘ಬಿಹಾರ, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಕಾಪ್ ಪಂಚಾಯತ್ ಗಳು ಇಂದಿಗೂ ಸಕ್ರಿಯವಾಗಿವೆ. ಈ ಪಂಚಾಯತ್ ಹೆಣ್ಣು ಮಕ್ಕಳಿಗೆ ಮರಣ ದಂಡನೆ ಸಹಿತ ಎಲ್ಲ ರೀತಿಯ ಶಿಕ್ಷೆಯನ್ನು ಕೊಡುತ್ತದೆ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಆ ಪಂಚಾಯತ್‌ಗಳನ್ನು ನಿಷೇಧ ಮಾಡಲು ಇಂದಿಗೂ ನಮ್ಮ ಸರಕಾರಗಳಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಉತ್ತರ ಭಾರತ ಮುಖ್ಯ ಓಟ್ ಬ್ಯಾಂಕ್ ಆಗಿರುವ ಜಾಟ್ ಸಮುದಾಯದವರೇ ಈ ಪಂಚಾಯತ್‌ಗಳನ್ನು ನಡೆಸುತ್ತಿದ್ದಾರೆ’
-ಪ್ರೊ.ಪುರುಷೋತ್ತಮ ಬಿಳಿಮಲೆ







