ಮಾ.9: ಕಾರಂತ ಟ್ರಸ್ಟ್‌ನಿಂದ ಮಹಿಳಾ ದಿನಾಚರಣೆ ಸಪ್ತಾಹ

ಉಡುಪಿ, ಮಾ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘ ಹಾಗೂ ಉಡುಪಿ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗಳ ಸಹ ಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣಾ ಸಪ್ತಾಹದ ಉದ್ಘಾಟನಾ ಸಮಾರಂಭವು ಮಾ.9ರಂದು ಸೋಮವಾರ ಅಪರಾಹ್ನ 2:00 ಗಂಟೆಗೆ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕ ಸಭಾಪತಿ ಬಸರೂರು ರಾಜೀವ ಶೆಟ್ಟಿ ಉದ್ಘಾಟಿಸ ಲಿದ್ದು, ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಚಿಂತಕಿ ಮತ್ತು ಲೇಖಕಿ ಬಿ.ಎಂ.ರೋಹಿಣಿ ಕಾರಂತರ ಚಿಂತನೆಗಳ ಕುರಿತು ಮತ್ತು ಸುರತ್ಕಲ್‌ನ ಪ್ರೊ. ದಿವ್ಯರಾಣಿ ಪ್ರದೀಪ್ ಮಹಿಳಾ ಸಬಲೀಕರಣದ ಸವಾಲುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಪ್ತಾಹದ ಅಂಗವಾಗಿ ಮಾ.8ರಂದು ಮರವಂತೆಯ ಸರಕಾರಿ ಪ್ರೌಢ ಶಾಲೆಯಲ್ಲಿ ರಂಗವಲ್ಲಿಯ ಮೂಲಕ ಮಾನವ ಹಕ್ಕುಗಳ ಪರಿಚಯ, ಮಾ.10ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕೆರೆ ಇಲ್ಲಿ ಉಪನ್ಯಾಸಕಿ ಡಾ.ವಿದ್ಯಾಲತ, 11ರಂದು ಕಾರ್ಕಳದ ಶ್ರೀ ವೆಂಕಟರಮಣ ಕಾಲೇಜಿನಲ್ಲಿ ಡಾ.ನಿಕೇತನ, 12ರಂದು ಮೂಡ್ಲು ಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಸಂತಿ ಶೆಟ್ಟಿ ಬ್ರಹ್ಮಾವರ ಹಾಗೂ ಮಾ.13 ರಂದು ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ದುರ್ಗಾ ಮೆನನ್ ಇವರಿಂದ ಕಾರಂತರ ಬರಹಗಳಲ್ಲಿನ ಮಹಿಳಾ ಅಭಿವ್ಯಕ್ತಿ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಪ್ತಾಹದ ಸಮಾರೋಪ ಸಮಾರಂಭವು ಮಾ.14ರ ಬೆಳಿಗ್ಗೆ 10 ಗಂಟೆಗೆ ಬ್ರಹ್ಮಗಿರಿಯ ರೆಡ್‌ಕ್ರಾಸ್ ಸಂಸ್ಥೆಯ ಹೆನ್ರಿ ಡುನ್ಯಾಂಟ್ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ರಂಗನಟಿ ಮತ್ತು ಚಿಂತಕಿ ಗೀತಾ ಸುರತ್ಕಲ್ ಮಹಿಳಾ ಸಬಲೀಕರಣದಲ್ಲಿ ರಂಗಭೂಮಿ ಮತ್ತುಕಾರಂತರು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಸಾಧಕರನ್ನು ಸನ್ಮಾನಿಸಲಿದ್ದಾರೆ ಎಂದು ಡಾ. ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.







