ಫೆ.9 - 10ರಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಡುಪಿಗೆ ಪ್ರವಾಸ

ಉಡುಪಿ, ಫೆ.7:ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಫೆಬ್ರವರಿ 9 ಮತ್ತು 10ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ.9ರಂದು ರಾತ್ರಿ 9 ಗಂಟೆಗೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡುವ ದಿನೇಶ್ ಗುಂಡೂರಾವ್, ಫೆ.10ರಂದು ಬೆಳಗ್ಗೆ 10 ಗಂಟೆಗೆ ಕುಂದಾಪುರದ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್‌ರೀಚ್ ಸರ್ವಿಸ್ ಸೆಂಟರ್ ಹಾಗೂ ನೂತನ ಡಯಾಲಿಸಿಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ ಬೆಳಗ್ಗೆ 11 ಗಂಟೆಗೆ ಕೋಟೇಶ್ವರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ಅಪರಾಹ್ನ 2 ಗಂಟೆಗೆ ಉಡುಪಿ ಜಿಲ್ಲಾ ಆಸ್ಪತ್ರೆಯ ನೂತನ ಡಯಾಲಿಸೀಸ್ ಘಟಕವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಯ ಪರಿಶೀಲನೆ ನಡೆಸಲಿದ್ದಾರೆ. 3:00 ಗಂಟೆಗೆ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.





