ಅ.9: ಮಿಷನ್ ಇಂದ್ರಧನುಷ್ 3ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ, ಅ.7: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯಲ್ಲಿ ಲಸಿಕೆಗೆ ಅರ್ಹರಿರುವ ಗರ್ಭಿಣಿಯರಿಗೆ, 2 ವರ್ಷದೊಳಗಿನ ಅರ್ಹ ಮಕ್ಕ ಳಿಗೆ ಮತ್ತು ಲಸಿಕೆ ವಂಚಿತ ಗರ್ಭಿಣಿಯರು ಹಾಗೂ 0-5 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಮೂರನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಅ.9ರ ಸೋಮವಾರದಂದು ಬೆಳಗ್ಗೆ 9 ಗಂಟೆಗೆ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ವಂಚಿತ ಗರ್ಭಿಣಿಯರಿಗೆ ಮತ್ತು 0-5 ವರ್ಷದ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಲಸಿಕಾ ಕಾರ್ಯಕ್ರಮ ಅ.9ರಿಂದ 14ರವರೆಗೆ ನಡೆಯಲಿದೆ.
ಲಸಿಕೆಯು ದಡಾರ-ರುಬೆಲ್ಲಾ ರೋಗ ನಿರೋಧಕತೆಯ ಅಂತರವನ್ನು ಕಡಿಮೆ ಮಾಡುವುದು. ಸಾರ್ವತ್ರಿಕ ಲಸಿಕಾ ವೇಳಾ ಪಟ್ಟಿಗೆ ಇತ್ತೀಚಿಗೆ ಸೇರ್ಪಡೆಗೊಂಡ ಪಿಸಿವಿ ಲಸಿಕೆ (ನ್ಯುಮೋನಿಯಾ ತಡೆಗಟ್ಟಲು)ಮತ್ತು 3ನೇ ಡೋಸ್ ಆಗಿ ಸೇರ್ಪಡೆ ಗೊಂಡ ಎಫ್‌ಐಪಿವಿ ಲಸಿಕೆ (ಪೋಲಿಯೋ ಕಾಯಿಲೆ ತಡೆಗಟ್ಟಲು) ಪ್ರಗತಿಯನ್ನು ಹಾಗೂ ಡಿಪಿಟಿ ಬೂಸ್ಟರ್ (ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು ರೋಗಗಳನ್ನು ತಡೆಗಟ್ಟಲು) ಓಪಿವಿ ಬೂಸ್ಟರ್ (ಪೋಲಿಯೋ ಕಾಯಿಲೆಯನ್ನು ತಡೆಗಟ್ಟಲು) ಲಸಿಕೆಗಳ ಪ್ರಗತಿಯನ್ನು ಹೆಚ್ಚಿಸಲಾಗುವುದು.
ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಒಟ್ಟು 356 ಲಸಿಕಾ ಕೇಂದ್ರಗಳನ್ನು ಗುರುತಿಸ ಲಾಗಿದೆ. ಜಿಲ್ಲೆಯಲ್ಲಿ ಒಟ್ಟು 260 ಗರ್ಭಿಣಿಯರಿಗೆ ಮತ್ತು 0-2 ವರ್ಷದ ಲಸಿಕೆಗೆ ಅರ್ಹರಾದ 1439 ಮಕ್ಕಳಿಗೆ ಮತ್ತು 2-5 ವರ್ಷದ 8 ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ.
ಅಂಗನವಾಡಿಗಳಲ್ಲಿ, ಆರೋಗ್ಯ ಸಂಸ್ಥೆಗಳಲ್ಲಿ ಹಾಗೂ ಸಮುದಾಯ ಮಟ್ಟದಲ್ಲಿ ಲಸಿಕಾ ಶಿಬಿರಗಳನ್ನು ಏರ್ಪಡಿಸಿ ಅರ್ಹ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಲಸಿಕಾ ಶಿಬಿರ ಜರುಗುವ ದಿನಾಂಕ ಮತ್ತು ಸ್ಥಳದ ಬಗ್ಗೆ ಆಶಾ ಕಾರ್ಯಕರ್ತೆಯರು ಪೋಷಕರಿಗೆ ಮಾಹಿತಿ ನೀಡುತ್ತಾರೆ ಮತ್ತು ಪೋಷಕರು ಲಸಿಕಾ ಶಿಬಿರ ಜರುಗುವ ಕೇಂದ್ರಗಳಿಗೆ ಮಕ್ಕಳನ್ನು ಕರೆತಂದು ಲಸಿಕೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.







