9/11 ಸೇರಿದಂತೆ ಉಡುಪಿ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ: ಲಕ್ಷ್ಮೀ ಹೆಬ್ಬಾಳ್ಕರ್

ಬೈಲೂರು(ಕಾರ್ಕಳ), ಸೆ.12: ಉಡುಪಿಯೂ ಸೇರಿದಂತೆ ಕರಾವಳಿ ಭಾಗದಲ್ಲಿ ಜನತೆಯನ್ನು ಬಾಧಿಸುತ್ತಿರುವ 9/11ಗೆ ಅನುಮತಿ, ಕೆಂಪು ಕಲ್ಲು, ಮರಳಿನ ಲಭ್ಯತೆ ಹಾಗೂ ವಿಪರೀತ ಮಳೆಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ವತಿುಂದ ಮಹಿಳಾ ಸ್ನೇಹಿ ನೀರೆ ಗ್ರಾಮ ಪಂಚಾಯತ್‌ನ ನೂತನ ಕಟ್ಟಡ, ಸಭಾಭವನ, ಸಂಜೀವಿನಿ ಸಭಾಭವನ ಹಾಗೂ ಗ್ರಾಮ ಆಡಳಿತ ಅಧಿಕಾರಿ ಗಳ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಉತ್ತಮ ಸೇವೆಗಳು ಲಭಿಸಿದರೆ ಮಾತ್ರ ವಿಧಾನಸೌಧದ ಹಂತದಲ್ಲೂ ತ್ವರಿತಗತಿಯಲ್ಲಿ ಕೆಲಸ ಗಳಾಗುತ್ತವೆ ಎಂದು ಅಭಿಪ್ರಾಯಪಟ್ಟ ಸಚಿವರು, ಭ್ರಷ್ಟಾಚಾರವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಿತ್ತುಹಾಕಿದರೆ, ಮೇಲಿನ ಹಂತದಲ್ಲೂ ಜನರಿಗೆ ಸರಿಯಾದ ನ್ಯಾಯ ಸಿಗಲು ಸಾಧ್ಯವಾಗುತ್ತದೆ ಎಂದರು.
ವಿವಿಧ ದಾನಿಗಳ ನೆರವಿನಿಂದ 1.75 ಕೋಟಿ ರೂ.ವೆಚ್ಚದ ಭವ್ಯ ಹಾಗೂ ಸುಂದರವಾಗಿ ನಿರ್ಮಾಣಗೊಂಡ ‘ಗ್ರಾಮಸೌಧ’ ಕಟ್ಟಡವನ್ನು ಪ್ರಶಂಸಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ ಜಿಲ್ಲೆಯ ಜನರು ಸಾಂಸ್ಕೃತಿಕ ರಾಯಭಾರಿ ಗಳು. ಬೇರೆ ಊರುಗಳಲ್ಲಿ ನೆಲೆಸಿದ್ದರೂ ಊರ ದೇವಸ್ಥಾನಗಳು, ಶಾಲೆ ಹಾಗೂ ಗ್ರಾಪಂ ಕಟ್ಟಡಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಸರಕಾರದ ಅನುದಾನಕ್ಕೆ ಕಾಯದೇ ಖಾಸಗಿಯವರ ನೆರನಿಂದ ಗ್ರಾಮಗಳು ಅಭಿವೃದ್ಧಿ ಕಾಣುತ್ತಿರುವುದು ಶ್ಲಾಘನೀಯ ವಿಷಯ ಎಂದರು.
ನೀರೆ ಕಣಜಾರು ಗ್ರಾಮಪಂಚಾಯತ್ ಮಟ್ಟದಲ್ಲಿ ಮಹಿಳೆಯರಿಗೆ ಎಲ್ಲಾ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ವಿತರಣೆಯಲ್ಲಿ ನೀಡುತ್ತಿರುವ ವಿಶೇಷ ಆದ್ಯತೆಯನ್ನು ತುಂಬು ಕಂಠದಿಂದ ಹೊಗಳಿದ ಸಚಿವರು, ರಾಜ್ಯದ ಬೇರೆ ಗ್ರಾಮ ಪಂಚಾಯತ್‌ಗಳಿಗೆ ಮಾದರಿಯಾಗಿ ನೀರೆ ಗ್ರಾಮ ಪಂಚಾಯತ್ ಮಹಿಳಾ ಸ್ವಾವಲಂಬನೆಗೆ ಕ್ರಮ ತೆಗೆದುಕೊಂಡಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಗ್ರಾಮ ಅಭಿವೃದ್ಧಿಯ ಸಂಕೇತ. ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆ ಸಾಕಾರವಾಗುವುದು ಇಲ್ಲಿಂದಲೇ. ಈ ಕಟ್ಟಡವು ಸ್ಥಳೀಯ ಆಡಳಿತ, ಸಮುದಾಯದ ಸಹಭಾಗಿತ್ವ ಮತ್ತು ಸಾರ್ವಜನಿಕ ಸೇವೆಗಳಿಗೆ ಕೇಂದ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದ ಅವರು, ಗಾಂಧಿಯವರು ದೂರದೃಷ್ಟಿ ಯಿಂದ ಗ್ರಾಮಗಳ ಸುಧಾರಣೆಯಿಂದ ಮಾತ್ರ ದೇಶದ ಅಭಿವೃದ್ದಿ ಎಂದಿದ್ದರು ಎಂದು ಹೆಬ್ಬಾಳ್ಕರ್ ನುಡಿದರು.
ಪಂಚಾಯತ್ ರಾಜ್ ವ್ಯವಸ್ಥೆಯ ಸುಧಾರಣೆಯಲ್ಲಿ ಕಾಂಗ್ರೆಸ್ ಯಾವತ್ತೂ ಮುಂಚೂಣಿಯಲ್ಲಿದೆ. ಆಧುನಿಕ ಭಾರತದ ನಿರ್ಮಾತೃ ರಾಜೀವ್ ಗಾಂಧಿ ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆ ವಿಕೇಂದ್ರೀಕರಣದ ಕೀರ್ತಿ ಸಲ್ಲುತ್ತದೆ. ನರೇಗಾ ಯೋಜನೆ ಬಂದ ನಂತರ ಗ್ರಾಮ ಪಂಚಾಯತಿಗಳ ಬಲವರ್ಧನೆಯಾಗಿದೆ ಎಂದು ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.
ಬೀದಿ ದೀಪಗಳ ಬಿಲ್ ತುಂಬುವ ಶಕ್ತಿಯೂ ಇಲ್ಲದ ಪಂಚಾಯತ್‌ಗಳು ಇಂದು ಸಾಕಷ್ಟು ಅನುದಾನ ಪಡೆಯುತ್ತಿವೆ. ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರ ಅತ್ಯಂತ ಮಹತ್ವದ್ದು. ಗ್ರಾಮಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶದ ಜನರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂಗಳೂ ಆಧುನಿಕ ಸೌಲಭ್ಯ ಹೊಂದಿ ಸುವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನ ಎಲ್ಲಾ ಸರಕಾರಿ ಕಟ್ಟಡಗಳನ್ನು ಇದೇ ರೀತಿ ಮೇಲ್ದರ್ಜೆಗೆ ಏರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯ ಜನತೆಗೆ ಸಮಸ್ಯೆಯಾಗಿರುವ 9/11 ಅರ್ಜಿ ವಿಲೇವಾರಿ, ಕೆಂಪು ಕಲ್ಲು ಸಮಸ್ಯೆ ಕುರಿತಂತೆ ಉಸ್ತುವಾರಿ ಸಚಿವರು ಕ್ರಮಕ್ಕೆ ಮುಂದಾಗಬೇಕು. ಸರಕಾರದ ನಿಯಮಾವಳಿ ಬದಲಾದರೆ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಅನುಕೂಲ ಆಗುವುದು. ಸರಕಾರದ ಗ್ಯಾರಂಟಿ ಯೋಜನೆ ಜನರಿಗೆ ಬದುಕು ಕೊಟ್ಟಿದೆ ಎಂದು ಒಪ್ಪಿಕೊಂಡ ಅವರು, ಸಮಸ್ಯೆ ಬಗೆಹರಿಸಲು ನಾವು ಸಚಿವರನ್ನು ಒತ್ತಾಯಿಸುತ್ತೇವೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಾಜ್ಯದಲ್ಲಿ 5950 ಗ್ರಾಪಂಗಳಿದ್ದು ಎಲ್ಲ ಗ್ರಾಮ ಪಂಚಾಯತಿ ಗಳಿಗೂ ನೀರೆ ಗ್ರಾಪಂ ಮಾದರಿ ಎನಿಸಿದೆ. ಪ್ರತಿ ಗ್ರಾಪಂ ಸಹ ಸರಕಾರದ ರೀತಿ ಕೆಲಸ ಮಾಡುವ ಅವಕಾಶ ಹೊಂದಿವೆ. ಸರಕಾರದ 29 ಇಲಾಖೆಗಳು ಗ್ರಾಪಂ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಿ ಜನಪರ ಕಾರ್ಯಕ್ರಮಗಳನ್ನು ಕೈಗೊಂಡರೆ ಪಂಚಾಯತ್ ರಾಜ್ ವ್ಯವಸ್ಥೆ ಸಾರ್ಥಕ ಕಾಣುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ನೀರೆ ಗ್ರಾಪಂ ಅಧ್ಯಕ್ಷ ಸಚ್ಚಿದಾನಂದ ಎಸ್.ಪ್ರಭು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಉಪಾಧ್ಯಕ್ಷ ಮುನಿಯಲು ಉದಯ ಕುಮಾರ್ ಶೆಟ್ಟಿ , ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಜಿಪಂ ಉಪಕಾರ್ಯದರ್ಶಿ ಎಸ್ ಎಸ್ ಕದ್ರೋಳ್ಳಿ, ಉಡುಪಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್., ಕಾರ್ಕಳ ತಾಲೂಕು ಪಂಚಾಯತ್ ಇಒ ಪ್ರಶಾಂತ್ ರಾವ್, ಉದ್ಯಮಿ ಉದಯ್‌ಕುಮಾರ್ ಶೆಟ್ಟಿ, ದಾಮೋದರ ಕಾಮತ್ ಮುಂತಾದವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಂಕಿತಾ ನಾಯಕ್ ಸ್ವಾಗತಿಸಿ, ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾ ಶೆಟ್ಟಿ ವಂದಿಸಿದರು.
ನೀರೆ ಗ್ರಾಮದ ಐವರು ಗರ್ಭಿಣಿಯರಿಗೆ ಸೀಮಂತ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಕಳ ಶಿಶು ಅಭಿವೃದ್ಧಿ ಯೋಜನೆಯ ಪೋಷಣ್ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಕಾರ್ಯಕ್ರಮದಲ್ಲಿ ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಐವರು ಗರ್ಭಿಣಿಯರಿಗೆ ಸಾಂಕೇತಿಕವಾಗಿ ಸೀಮಂತ ಕಾರ್ಯಕ್ರಮವನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಆಯೋಜಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಐವರು ಮಹಿಳೆಯರಿಗೆ ಸಿಹಿತಿಂಡಿಗಳು ಹಾಗೂ ಸೀರೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅತಿಥಿಗಳ ಎದುರು ಸೀಮಂತವನ್ನು ನಡೆಸಿಕೊಟ್ಟರು.







