ಕೊರಗ ಸಮುದಾಯದ ವ್ಯಕ್ತಿಯನ್ನು ಜೀತಕ್ಕೆ ಇಟ್ಟು ದೌರ್ಜನ್ಯ ಆರೋಪ: ಪ್ರಕರಣ ದಾಖಲು

ಕುಂದಾಪುರ, ಮಾ.10: ಕೊರಗ ಸಮುದಾಯದ ವ್ಯಕ್ತಿಯೊಬ್ಬರನ್ನು ಮನೆಯಲ್ಲಿ ಜೀತಕ್ಕೆ ಇಟ್ಟು ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರು ಸುಮಾರು 30 ವರ್ಷಗಳ ಹಿಂದೆ ಕನ್ಯಾನ ಗ್ರಾಮದ ಕೊರಗ ಸಮುದಾಯದ ನಾಗ (65) ಎಂಬವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಕೆಲಸಕ್ಕೆ ಇಟ್ಟುಕೊಂಡಿದ್ದರು. ಸುಬ್ಬಣ್ಣ ಶೆಟ್ಟಿ ಮೃತಪಟ್ಟ ನಂತರ ಅವರ ಮಗಳು ರಜನಿ ಶೆಟ್ಟಿ ಮತ್ತು ಅವರ ಅಳಿಯ ಕರುಣಾಕರ ಶೆಟ್ಟಿ ಎಂಬವರು ನಾಗ ಅವರನ್ನು ಮನೆಯಲ್ಲಿ ದನ ಕಾಯಲು, ತೋಟದ ಕೆಲಸ ಮಾಡಲು ಸೇರಿಸಿ ಕೊಂಡಿದ್ದರು.
ಇವರು ನಾಗ ಅವರಿಂದ ದನ, ಎಮ್ಮೆ, ಸೆಗಣಿ ತೆಗೆದು ಗದ್ದೆ ಕೆಲಸ, ಮನೆಯ ಶೌಚಾಲಯ ಸ್ವಚ್ಛತೆ ಮಾಡಿಸುತ್ತಿ ದ್ದರು. ನಾಗ ಅವರನ್ನು 30 ವರ್ಷಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಸಿಕೊಂಡಿದ್ದು, ಸರಿಯಾದ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಭೂತ ಸೌಕರ್ಯ ಕೊಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು ಎಂದು ದೂರಲಾಗಿದೆ.
ಇವರಿಗೆ ದನದ ಕೊಟ್ಟಿಗೆಯಲ್ಲಿಯೇ ವಾಸ ಸ್ಥಳವನ್ನಾಗಿ ನೀಡಿದ್ದು, ತಿಂಡಿ ತಟ್ಟೆಗಳು, ಬಟ್ಟೆ, ಎಲ್ಲಾ ದನದ ಕೊಟ್ಟಿಗೆಯಲ್ಲಿಯೇ ಇಡುವಂತೆ ಒತ್ತಾಯ ಮಾಡಿದ್ದಾರೆ. ಊಟವನ್ನು ಕೂಡ ಬಾಳೆ ಎಲೆಯಲ್ಲಿ ದನದ ಕೊಟ್ಟಿಗೆಯಲ್ಲಿ ನೀಡುತ್ತಿದ್ದರು. ನಾಗ ಅವರಿಗೆ ಸಂಬಳ ಕೊಡದೆ ಮನೆಯಿಂದ ಹೊರಗಡೆ ಹೋಗಲು ಬಿಡದೆ ದೌರ್ಜನ್ಯ ಎಸಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







