ಬಂಟಕಲ್ಲು ಬಸ್ ತಂಗುದಾಣದಲ್ಲಿ ತೆರೆದುಕೊಂಡ ಜನಸ್ನೇಹಿ ವಾಚನಾಲಯ

ಶಿರ್ವ, ಸೆ.23: ಬಸ್ಸು ತಂಗುದಾಣದಲ್ಲಿ ಬಸ್ ಕಾಯುವ ಅಥವಾ ವಿಶ್ರಾಂತಿ ಪಡೆಯುವ ನಾಗರಿಕರು ಮೊಬೈಲ್‌ನಲ್ಲಿಯೇ ಸಮಯ ಕಳೆಯುವುದು ಈಗ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ನಿಲ್ದಾಣವು ಮೊಬೈಲ್‌ಗೆ ಸ್ಪಲ್ಪವಿರಾಮ ನೀಡಿ ಪುಸ್ತಕದ ಕಡೆಗೆ ಕಣ್ಣು ಹಾಯಿಸುವಂತೆ ಮಾಡುತ್ತಿದೆ. ಆ ಮೂಲಕ ಪುಸ್ತಕ ಪ್ರೀತಿಯನ್ನು ಬೆಳೆಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ.
ಬಂಟಕಲ್ಲು ನಾಗರಿಕ ಸಮಿತಿ ಕಳೆದ ಮೂರು ವರ್ಷಗಳಿಂದ ಬಂಟಕಲ್ಲು ಕೇಂದ್ರವಾಗಿರಿಸಿ ಪರಿಸರದ ಸುತ್ತಮುತ್ತಲಿನ ಹಲವು ಸಮಾಜ ಮುಖಿ ಕಾರ್ಯ ಗಳನ್ನು ನಿರಂತರವಾಗಿ ನಡೆಸುತ್ತಿದೆ. ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಶಿರ್ವ ಗ್ರಾಪಂ ಬಂಟಕಲ್ಲು ವಾರ್ಡ್ ಸದಸ್ಯ ಕೆ.ಆರ್.ಪಾಟ್ಕರ್ ನೇತೃತ್ವದಲ್ಲಿ ಸಮಿತಿಯ ಸದಸ್ಯರ ಸಹಕಾರ ಹಾಗೂ ನಾಗರಿಕರ ಸ್ಪಂದನವೇ ವಿವಿಧ ಸೇವಾ ಸಾಧನೆಗಳಿಗೆ ಸ್ಪೂರ್ತಿ ತುಂಬಿದೆ.
ಜನಸ್ನೇಹಿ ವಾಚನಾಲಯ: ಇದೀಗ ಸಮಿತಿಯ ವತಿಯಿಂದ ಬಂಟಕಲ್ಲು ಬಸ್ಸು ತಂಗುದಾಣದಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಜನಸ್ನೇಹಿ ತೆರೆದ ವಾಚನಾಲಯವನ್ನು ಆರಂಭಿಸಲಾಗಿದೆ.
ಇಲ್ಲಿನ ಕಪಾಟಿಗೆ ಬಾಗಿಲುಗಳಿಲ್ಲ. ದಿನಪತ್ರಿಕೆ, ವಾರ ಪತ್ರಿಕೆ, ಮಾಸಿಕ ಪತ್ರಿಕೆ, ಸಹಿತ ವಿವಿಧ ಕತೆ, ಕಾದಂಬರಿಗಳು, ಸಣ್ಣಕತೆಗಳು, ಕವನ, ಪ್ರಸಿದ್ಧ ಸಾಹಿತಿಗಳ ಪುಸ್ತಕಗಳು ಎಲ್ಲವೂ ಇವೆ. ಆಸಕ್ತ ಓದುಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಯಾರು ಕೂಡ ಯಾವುದೇ ಪುಸ್ತಕಗಳನ್ನು ಓದಬಹುದು. ಅಲ್ಲದೆ ಮನೆಗೆ ತಕೊಂಡು ಹೋಗಿ ಓದಿದ ನಂತರ ಪುನ: ತಂದು ಇಡುವ ಅವಕಾಶಗಳಿವೆ. ಓದುಗರಿಗೆ ಉಪಯುಕ್ತ ಮಾಹಿತಿ ನೀಡುವ ಸೂಚನಾ ಫಲಕವನ್ನು ಕೂಡ ಇಲ್ಲಿ ಅಳವಡಿಸಲಾ ಗಿದೆ ಎಂದು ಕೆ.ಆರ್.ಪಾಟ್ಕರ್ ತಿಳಿಸಿದ್ದಾರೆ.
ಸಾರ್ವಜನಿಕರಿಂದ ಸ್ಪಂದನ: ವಾಚನಾಲಯ ಪ್ರಾರಂಭಿಸುವ ಬಗ್ಗೆ ಸಮಿತಿ ಯಿಂದ ನೀಡಿದ ವಾಟ್ಸಪ್ ಸಂದೇಶಕ್ಕೆ ನೂರಾರು ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಜೊತೆಗೆ ಉಚಿತವಾಗಿ ಪುಸ್ತಕಗಳನ್ನು ನೀಡುವ ಕುರಿತು ದಾನಿಗಳಿಂದ ಭರವಸೆಗಳ ಮಹಾಪೂರವೇ ಹರಿದು ಬಂದಿದೆ.
ತಮ್ಮ ಮನೆಗಳಲ್ಲಿ ಓದಿ ಓದಿ ಅಟ್ಟ ಸೇರಿದ ಹಲವಾರು ಅತ್ಯುತ್ತಮ ಪುಸ್ತಕ ಗಳನ್ನು ತಂದು ನೀಡಿದವರು, ಪುಸ್ತಕ ಖರೀದಿ ಸಲು ಧನಸಹಾಯ ನೀಡಲು ಮುಂದೆ ಬಂದ ದಾನಿಗಳು, ನಿರಂತರ ಪ್ರಾಯೋಜಕತ್ವವನ್ನು ವಹಿಸಲು ಸಿದ್ಧರಾದ ಪುಸ್ತಕ ಪ್ರೇಮಿಗಳು, ಜನಸ್ನೇಹಿ ಪುಸ್ತಕ ಗೂಡು ತುಂಬುವಲ್ಲಿ ಪ್ರೇರಕರಾಗಿದ್ದಾರೆ ಎಂದು ಕೆ.ಆರ್.ಪಾಟ್ಕರ್ ತಿಳಿಸಿದ್ದಾರೆ.
ವಾಚನಾಲಯ ಲೋಕಾರ್ಪಣೆ: ಈ ವಾಚನಾಲಯವನ್ನು ಮಂಗಳವಾರ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆ.ಆರ್.ಪಾಟ್ಕರ್ ದೀಪ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿದರು. ದಾನಿಗಳಾದ ರಾಮಚಂದ್ರ ನಾಯಕ್ ಪಡುಬೆಳ್ಳೆ, ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಪ್ರಮುಖರಾದ ರಾಘವೇಂದ್ರ ನಾಯಕ್, ಉಮೇಶ ರಾವ್, ಮಂಜುನಾಥ್ ಪೂಜಾರಿ, ಜಗದೀಶ ಆಚಾರ್ಯ, ವಿಜಯ್ ಧೀರಜ್, ಪ್ರಮೀಳಾ ಲೋಬೊ, ಸರಸ್ವತಿ ಎಸ್.ಕಾಮತ್, ಶಿರ್ವ ಪಂಚಾಯತ್ ವಾಚನಾಲಯ ನಿರ್ದೇಶಕಿ ಅಮ್ಮಿ, ಸುರೇಶ್ ಆಚಾರ್ಯ, ಮಾಧವ ಆಚಾರ್ಯ, ವಾಲೆಟ್ ಕಸ್ತಲಿನೊ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಅರುಂಧತಿ ಪ್ರಭು ನಿರೂಪಿಸಿದರು. ನಾಗರಿಕ ಸಮಿತಿ ಕಾರ್ಯದರ್ಶಿ ದಿನೇಶ ದೇವಾಡಿಗ ವಂದಿಸಿದರು.







