ಮಾಧ್ಯಮ ಧರ್ಮ ಪಾಲಿಸಿದರೆ ಸ್ವಸ್ಥ ಸಮಾಜ ನಿರ್ಮಾಣ: ಎಸ್ಪಿ ಹರಿರಾಂ ಶಂಕರ್

ಕುಂದಾಪುರ, ಜು.23: ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಬರುವ ಒಂದು ವರದಿ ಅಥವಾ ಚಿತ್ರಗಳು ಅವ್ಯವಸ್ಥೆಯನ್ನೇ ಸರಿಪಡಿಸುವಷ್ಟು ಪ್ರಬಲವಾಗಿದೆ. ಹೀಗಾಗಿ ಸಮಾಜದ ಕಣ್ಣು ಕಿವಿಗಳಂತಿರುವ ಮಾಧ್ಯಮ ಗಳು ನೈಜ್ಯ ವಿಚಾರಗಳನ್ನು ಯಾವುದೇ ಹಿತಾಸಕ್ತಿಗಳಿಲ್ಲದೆ ನಿಷ್ಠುರವಾಗಿ ಹೇಳುವ ಮನಸ್ಥಿತಿ ಯನ್ನು ಹೊಂದಿ ಮಾಧ್ಯಮ ಧರ್ಮವನ್ನು ಪಾಲಿಸಿದರೆ ಸ್ವಸ್ಥ ಸಮಾಜಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದ್ದಾರೆ.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಕೋಯಾಕುಟ್ಟಿ ಹಾಲ್‌ನಲ್ಲಿ ಬುಧವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಡೈರೆಕ್ಟರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಡ್ಡರ್ಸೆ ರಘುರಾಮ ಶೆಟ್ಟಿಯವರಂತಹ ಧೀಮಂತ ಪತ್ರಕರ್ತರ ಸುಪುತ್ರರಾಗಿದ್ದ ಐಪಿಎಸ್ ಮಧುಕರ ಶೆಟ್ಟಿ, ತಮ್ಮ ಆದರ್ಶಗಳಿಂದ ಅಧಿಕಾರಿ ಗಳಿಗೆ ಮಾದರಿಯಾಗಿದ್ದಾರೆ. ಒಳ್ಳೆಯ ವಿಚಾರಗಳನ್ನು ಪ್ರಚುರ ಪಡಿಸುವ ಹಾಗೆಯೇ ಲೋಪಗಳನ್ನು ಕೂಡ ಮಾಧ್ಯಮದವರು ನಿಷ್ಠುರವಾಗಿ ಹೇಳಬೇಕು. ನೊಂದವರಿಗೆ ನ್ಯಾಯ ಕೊಡಿಸುವ ಸೇತುವಿನಂತೆ ಮಾಧ್ಯಮಗಳು ಕೆಲಸ ಮಾಡಬೇಕು ಎಂದರು.
ಪತ್ರಕರ್ತರ ಡೈರೆಕ್ಟರಿ ಬಿಡುಗಡೆ ಮಾಡಿದ ಗೀತಾನಂದ ಫೌಂಡೇಶನ್ ಕೋಟ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ, ಸಮಾಜದ ಕೈಗನ್ನಡಿಯಂತಿರುವ ಮಾಧ್ಯಮ ಸರಿ-ತಪ್ಪುಗಳನ್ನು ವಿಶ್ಲೇಷಣೆ ಮಾಡಿ ಹೇಳುವ ಗುಣ ಸ್ವಭಾವಗಳನ್ನು ಬೆಳೆಸಿಕೊಳ್ಳಬೇಕು. ವೃತ್ತಿ ನಿಷ್ಠೆ ಹಾಗೂ ಬದ್ಧತೆಗಳು ನಮ್ಮ ಜೊತೆಗೆ ಇದ್ದಾಗ, ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯ ಎನ್ನುವುದಕ್ಕೆ ಪತ್ರಕರ್ತರ ಜೀವನವೇ ಉತ್ತಮ ಉದಾಹರಣೆ ಎಂದು ತಿಳಿಸಿದರು.
ಮಣೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ್ ಉಪನ್ಯಾಸ ನೀಡಿ, ಖಡ್ಗಕ್ಕಿಂತ ಲೇಖನಿ ಹರಿತ ಎನ್ನುವುದು ಎಷ್ಟೋ ಸಂದರ್ಭಗಳಲ್ಲಿ ನಿಜವಾಗಿದೆ. ಜಾತಿ-ಮತಗಳ ಅಂತರದ ಗೋಡೆಗಳನ್ನು ಮೀರಿ ನಿಲ್ಲುವ ಪತ್ರಕರ್ತರಿಗೆ ವೃತ್ತಿ ಧರ್ಮವೇ ಶ್ರೀರಕ್ಷೆ ಎಂದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಆಚಾರ್ಯ, ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ. ಗೊಂಡ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಉಪಾಧ್ಯಕ್ಷ ವಿನಯ್ ಪಾಯಸ್, ಕಟ್ಟಡ ಸಮಿತಿ ಅಧ್ಯಕ್ಷ ರಾಜೇಶ್ ಕೆ.ಸಿ., ತಾಲ್ಲೂಕು ಸಂಘದ ಕೋಶಾಧಿಕಾರಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಯು.ಎಸ್.ಶೆಣೈ ಹಾಗೂ ಡಾ.ಉದಯ ಕುಮಾರ್ ತಲ್ಲೂರು ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸಂಘದ ಕಾರ್ಯದರ್ಶಿ ಗಣೇಶ್ ಬೀಜಾಡಿ ಸ್ವಾಗತಿಸಿದರು, ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ವಂದಿಸಿದರು.







