ಶಿರ್ವ | ಹಿರಿಯರೆಡೆಗೆ ಸಾಹಿತ್ಯದ ನಡಿಗೆ: ವಿಷ್ಣುಮೂರ್ತಿ ಮಧ್ಯಸ್ಥರಿಗೆ ಗೌರವ

ಶಿರ್ವ: ದೇವರ ನಾಮ ಸಂಕೀರ್ತನೆಗಳು ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕಾದರೆ ಭಗವಂತನ ಸಾಕ್ಷಾತ್ಕಾರ ಆಗಬೇಕು. ಧಾರ್ಮಿಕ ಕ್ಷೇತ್ರದಿಂದ ಯುವ ಪೀಳಿಗೆ ವಿಚಲಿತರಾಗುತ್ತಿರುವ ಪ್ರಸ್ತಕ ಸನ್ನಿವೇಶದಲ್ಲಿ ಭಕ್ತಿ ಸಂಕೀರ್ತನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಮನೆ ಮನಗಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಸಂಕೀರ್ತನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಂಕೀರ್ತನಾ ಗುರು, ಕಲಾವಿದ ಮಟ್ಟು ವಿಷ್ಣುಮೂರ್ತಿ ಮಧ್ಯಸ್ಥ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಮಟ್ಟು ಮಧ್ಯಸ್ಥರ ಮನೆಯಲ್ಲಿ ಶನಿವಾರ ಏರ್ಪಡಿಸಿದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತು ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಹಿರಿಯರ ಜೀವನ, ಸಾಧನೆಗಳು ಅಪೂರ್ವವಾಗಿದ್ದು, ಭವಿಷ್ಯದ ಪೀಳಿಗೆಗೆ ಜ್ಞಾನದೀಗೆಯಾಗಿ ಉಳಿಸುವ ನಿಟ್ಟಿನಲ್ಲಿ ಪುಸ್ತಕಗಳ ರೂಪದಲ್ಲಿ ದಾಖಲಿಸುವ ಕಾರ್ಯವನ್ನು ಸಾಹಿತ್ಯ ಪರಿಷತ್ತು ಮಾಡಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಎಂ.ಗೋಪಾಲಕೃಷ್ಣ ರಾವ್ ಮಟ್ಟು ಮಾತನಾಡಿದರು. ನಿವೃತ್ತ ಪ್ರಾಂಶುಪಾಲೆ ಎ.ಲಕ್ಷ್ಮೀ ಬಾ ತಮ್ಮ ಅನುಭವ ಹಂಚಿಕೊಂಡರು. ಉಡುಪಿ ಜಿಲ್ಲಾ ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಜಿಲ್ಲಾ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹಮೂರ್ತಿ ರಾವ್, ಭಾಸ್ಕರ ಕಾಮತ್, ಬಿಳಿಯಾರು ಭಾಸ್ಕರ್ ಆಚಾರ್ಯ, ಪುಷ್ಪಾ ಮಧ್ಯಸ್ಥ ವೇದಿಕೆಯಲ್ಲಿದ್ದರು.
ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ, ತಾಲೂಕು ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಪರಿಚಯಿಸಿದರು. ಕಾರ್ಯದರ್ಶಿ ನೀಲಾನಂದ ನಾಯ್ಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು.







