ಬಿಳಿಮಲೆಯಂಥ ಮೇಧಾವಿ ವಿದ್ವಾಂಸರು ಹೀಗೆ ಹೇಳಬಾರದಿತ್ತು: ವಿವಾದಾತ್ಮಕ ಹೇಳಿಕೆಗೆ ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯೆ

ಉಡುಪಿ: ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ಮಂಗಳವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ಕರಾವಳಿಯ ಯಕ್ಷಗಾನ ಕಲಾವಿದರ ಕುರಿತು ಆಡಿದ ಮಾತು ವಿವಾದ ಅಲೆ ಎಬ್ಬಿಸಿದೆ.
‘ಯಕ್ಷಗಾನದ ಒಳಗೆ ಎಷ್ಟೋ ಬಾರಿ ಹೋಮೊಸೆಕ್ಸ್ (ಸಲಿಂಗಕಾಮ) ಬೆಳೀತದೆ’ ಎನ್ನುತ್ತಾ ಅವರು ನೀಡಿದ ವಿವರಣೆ ಇದೀಗ ಯಕ್ಷಗಾನದ ತವರೂರಿನ ಕರಾವಳಿ ಜಿಲ್ಲೆಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು, "ಹಿರಿಯ ವಿದ್ವಾಂಸರಾದ ಪ್ರೊ. ಬಿಳಿಮಲೆ ಅವರು ಇಂಥ ಹೇಳಿಕೆ ನೀಡಿರುವುದು ತಪ್ಪು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಕ್ಷಗಾನದಲ್ಲಿ ಒಳ್ಳೆಯವರೂ ಇರುತ್ತಾರೆ. ಕೆಟ್ಟವರೂ ಇದ್ದಾರೆ. ಆದರೆ ಬಿಳಿಮಲೆಯಂತಹ ಮೇಧಾವಿ ವಿದ್ವಾಂಸರು ಈ ರೀತಿ ಹೇಳಬಾರದಿತ್ತು ಎಂದು ಡಾ.ತಲ್ಲೂರು ಹೇಳಿದರು.
ಯಕ್ಷಗಾನ ನಮ್ಮ ಮಣ್ಣಿನ ಕಲೆ. ಬಹಳ ಶ್ರೀಮಂತವಾದದ್ದು. ಯಕ್ಷಗಾನದ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಡೆಗೆ ಗಮನ ಕೊಡೋಣ. ಪುರುಷೋತ್ತಮ ಬಿಳಿಮಲೆ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಕಲೆಗೆ- ಕಲಾವಿದರಿಗೆ ಸಮಸ್ಯೆ ಆಗದಂತೆ ಗೊಂದಲ ಬಗೆಹರಿಯಲಿ ಎಂದರು.
ಬಿಳಿಮಲೆ ಹಿರಿಯ ವಿದ್ವಾಂಸರು ಸಾಹಿತಿಗಳು. ಬಿಳಿಮಲೆಯವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ಅವರ ಫೋನ್ ಸ್ವಿಚ್ ಆಫ್ ಇದೆ. ಸಂಪರ್ಕವಾದರೆ ಮಾತನಾಡುತ್ತೇನೆ. ಸಾರಾಸಗಟಾಗಿ ಅವರು ಎಲ್ಲಾ ಕಲಾವಿದರಿಗೆ ಆರೋಪಿಸಿದ್ದು ಸರಿಯಲ್ಲ. ಪ್ರಪಂಚದಲ್ಲಿ ಸರಿ ತಪ್ಪು , ಕೆಟ್ಟದ್ದು ಒಳ್ಳೆದು ಸಹಜ. ಸಾಮಾನ್ಯ ವ್ಯಕ್ತಿಗಳು ಹೇಳಿದ್ದರೆ ಖಂಡಿಸಬಹುದಿತ್ತು. ಪುರುಷೋತ್ತಮ ಬಿಳಿಮಲೆ ರಾಷ್ಟ್ರ ಮಟ್ಟದ ಮೇಧಾವಿ ಸಾಹಿತಿ, ಕಲಾವಿದರು. ಚರ್ಚೆಯನ್ನು ಸೌಹಾರ್ದಯುತವಾಗಿ ಬಗೆಹರಿಸೋಣ ಎಂದು ಅವರು ಮಾಧ್ಯಮಗಳಿಗೆ ಪತ್ರಿಕ್ರಿಯಿಸಿದರು.







