ಆ.12, 18ರಂದು ಬೀಡಿ ಕಾರ್ಮಿಕರಿಂದ ಧರಣಿ

ಉಡುಪಿ, ಆ.9: ಬೀಡಿ ಕಾರ್ಮಿಕರ ನ್ಯಾಯಬದ್ಧ ಹಕ್ಕಾಗಿರುವ ತುಟ್ಟಿ ಭತ್ತೆ ಹಾಗೂ ಕನಿಷ್ಠ ಕೂಲಿಯನ್ನು ಕಳೆದ ಮೂರು ವರ್ಷಗಳಿಂದ ನೀಡದಿರುವುದು ಖಂಡಿಸಿ ಆ.12ರಂದು ಉಡುಪಿ ಅಂಬಲಪಾಡಿಯಲ್ಲಿರುವ ಭಾರತ್ ಬೀಡಿ ಕಂಪೆನಿ ಎದುರು ಹಾಗೂ ಆ.18ರಂದು ಸಂತೆಕಟ್ಟೆಯಲ್ಲಿರುವ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಎದುರುಗಡೆ ಬೆಳಿಗ್ಗೆ 10.30ಕ್ಕೆ ಧರಣಿ ನಡೆಸಲು ಉಡುಪಿ ಜಿಲ್ಲಾ ಬೀಡಿ ಫೆಡರೇಶನ್(ಸಿಐಟಿಯು) ನಿರ್ಧರಿಸಿದೆ.
ಬೀಡಿ ಮಾಲಕರು ಬೀಡಿ ಕಾರ್ಮಿಕರಿಗೆ ಕೊಡಬೇಕಾಗಿದ್ದ ತುಟ್ಟಿ ಭತ್ತೆ ವಿನಾಯಿತಿ ಕೋರಿ ಅಂದಿನ ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಪರಿಣಾಮ ಸರಕಾರ ಕಾರ್ಮಿಕ ವಿರೋಧಿಯಾಗಿ ಆದೇಶ ಮಾಡಿತು. ಇದರ ವಿರುದ್ಧ ಬೀಡಿ ಕಾರ್ಮಿಕರ ಸಂಘಟನೆಗಳು ಸಿಐಟಿಯು ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಿ ಸರಕಾರದ ಆದೇಶ ವಾಪಾಸ್ ಪಡೆಯಲಾಯಿತು. ಇದರ ವಿರುದ್ಧ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ತಡೆಯಾಜ್ಞೆ ವಿರುದ್ಧ ಕಾರ್ಮಿಕ ಸಂಘಟನೆಗಳು ಕಾನೂನು ಹೋರಾಟ ನಡೆಸಿದ್ದು, ಕಾರ್ಮಿಕರ ಪರವಾದ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದು ಪ್ರತಿ ಸಾವಿರ ಬೀಡಿಗೆ ರೂ.12.75 ರಂತೆ ನೀಡಲು ಆದೇಶ ನೀಡಿದೆ.
ಆದರೆ ಬೀಡಿ ಮಾಲಕರು ಈ ಹಣ ನೀಡಲು ವಿಳಂಬ ಮಾಡುತ್ತಿದ್ದು, ಇದನ್ನು ಖಂಡಿಸಿ ಸಿಐಟಿಯುಗೆ ಸೇರಿದ ಬೀಡಿ ಕಾರ್ಮಿ ಕರು ನಡೆಸುವ ಬೃಹತ್ ಪ್ರತಿಭಟನಾ ಧರಣಿಗೆ ಜಿಲ್ಲೆಯ ಸಹಸ್ರಾರು ಕಾರ್ಮಿಕರು ಭಾಗವಹಿಸಬೇಕು ಎಂದು ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕವಿರಾಜ್ ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





