ಫೆ. 26, 27ರಂದು ಉಪಲೋಕಾಯುಕ್ತ ನ್ಯಾ.ವೀರಪ್ಪ ದಿಢೀರ್ ಭೇಟಿ ವೇಳೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 17 ಸ್ವಯಂಪ್ರೇರಿತ ಪ್ರಕರಣಗಳು ದಾಖಲು

ಉಡುಪಿ, ಎ.8: ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು ಕಳೆದ ಫೆ. 26 ಮತ್ತು 27ರಂದು ಜಿಲ್ಲೆಗೆ ಸಂಬಂಧಿಸಿದಂತೆ ಬಾಕಿ ಇರುವ ದೂರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಹಮ್ಮಿಕೊಂಡ ಕಾರ್ಯಕ್ರಮದ ವೇಳೆ ಜಿಲ್ಲೆಯ ವಿವಿಧ ಇಲಾಖೆ ಹಾಗೂ ಸರಕಾರಿ ಕಚೇರಿಗಳಿಗೆ ನೀಡಿದ ದಿಢೀರ್ ಭೇಟಿಯ ಸಂದರ್ಭದಲ್ಲಿ ಕಂಡುಬಂದ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ವಿವಿಧ ಅಧಿಕಾರಿಗಳ ವಿರುದ್ಧ ಜಿಲ್ಲೆಯಲ್ಲಿ ಒಟ್ಟು 17 ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ 11-ಇ, ತತ್ಕಾಲ್ ಪೋಡಿ ಸೇರಿದಂತೆ ಹಲವು ಕಡತಗಳು ಬಾಕಿ ಇರುವ ಹಾಗೂ ಕಳೆದ 7 ವರ್ಷಗಳಿಂದ ನಿವೃತ್ತ ಸೈನಿಕರೊಬ್ಬರ ಜಮೀನಿನ ಅಳತೆ ಮಾಡದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಮಾಡಿಕೊಡಲು ತಿಳಿಸಿದ್ದಲ್ಲದೇ, ಹಲವು ನ್ಯೂನ್ಯತೆಗಳು ಕಂಡು ಬಂದ ಕಾರಣದಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
ಕೊಳಚೆ ನೀರು ಶುದ್ಧೀಕರಣ ಘಟಕ: ನಿಟ್ಟೂರಿನಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಭೇಟಿ ನೀಡಿದ ಸಂದರ್ಭದಲ್ಲಿ, ಉಡುಪಿ ನಗರದ ತ್ಯಾಜ್ಯ ನೀರು ಸಮರ್ಪಕವಾಗಿ ಸಂಸ್ಕರಣೆ ಆಗದೇ ಇರುವ ಬಗ್ಗೆ, ಘಟಕದ ನೀರಿನಲ್ಲಿ ಪಾಚಿ ಸಂಗ್ರಹವಾಗಿ ರುವುದು ಕಂಡುಬಂದಿರುವ ಬಗ್ಗೆ, ಘಟಕದ ತ್ಯಾಜ್ಯ ನೀರು ಮತ್ತು ನಗರದ ಇತರೆ ಸಂಸ್ಕರಿಸದ ಕೊಳಚೆ ನೀರು ಚರಂಡಿಗಳ ಮೂಲಕ ಹಾಗೂ ನದಿಗಳ ಮೂಲಕ ಹರಿದು ಸಮುದ್ರವನ್ನು ಸೇರಿ ಕಲುಷಿತಗೊಳಿಸುತ್ತಿದ್ದರೂ ಸಹ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನೀರಾವರಿ ಇಲಾಖೆಯವರು ನಗರಸಭೆ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳದೇ ಕರ್ತವ್ಯಲೋಪ ಎಸಗಿರುವ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಲಾಗಿದೆ.
ಅಲ್ಲದೇ ಕಲ್ಮಾಡಿ ಸೇತುವೆ ಬಳಿ ಹರಿಯುವ ಕಲುಷಿತ ನೀರಿನಿಂದ ಸೊಳ್ಳೆಗಳು, ನೊಣಗಳು ಹಾಗೂ ಇತರೆ ವಿಷ ಜಂತುಗಳು ಹೆಚ್ಚಿದ್ದು, ಇವುಗಳಿಂದ ಸ್ಥಳೀಯ ಜನರು ತೊಂದರೆ ಅನುಭಸುತ್ತಿರುವ ಬಗ್ಗೆ, ಮಲ್ಪೆ ಸೀವಾಕ್ ಪ್ರದೇಶ ಹಾಗೂ ಬಂದರಿನ ಸುತ್ತಮುತ್ತ ಪ್ರದೇಶದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲ್‌ಗಳನ್ನು, ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದು, ದುರ್ವಾಸನೆ ಬೀರುತ್ತಿರುವುದು ಕಂಡಬಂದಿತ್ತು. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆ ಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ: ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕರ್ತವ್ಯದ ಅವಧಿಯಲ್ಲಿ ಅನುಮತಿ ಪಡೆಯದೇ ಪತ್ರಾಂಕಿತ ಸಹಾಯಕರು ತೆರಳಿರುವ ಬಗ್ಗೆ, ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಅಥವಾ ದಾಖಲೆಗಳನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ವಿಫಲರಾಗಿರುವ ಬಗ್ಗೆ, ಕಚೇರಿಯ ಕೆಲ ಸಿಬ್ಬಂದಿಗಳು ಗುರುತಿನ ಚೀಟಿ ಧರಿಸದಿರುವ ಬಗ್ಗೆ, ಕಚೇರಿಗೆ ಹಾಜರಾತಿ, ನಗದು ಘೋಷಣೆ ಮತ್ತು ಚಲನವಲನ ವಹಿಯನ್ನು ಸರಕಾರಿ ಮಾರ್ಗ ಸೂಚಿಯಂತೆ ನಿರ್ವಹಿಸದಿರುವುದು ಮತ್ತು ಕರ್ತವ್ಯದಲ್ಲಿ ಹಲವು ನ್ಯೂನ್ಯತೆ ಕಂಡು ಬಂದ ಕಾರಣ ಇಲಾಖೆಯ ಹಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ, ಇಲಾಖಾಯಿಂದ ಕಳೆದೆರಡು ವರ್ಷಗಳಲ್ಲಿ ಹಮ್ಮಿಕೊಳ್ಳಲಾದ ಯೋಜನೆಗಳ ಕುರಿತು ಹಾಗೂ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ಕುರಿತಂತೆ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಸಮಾಜ ಕಲ್ಯಾಣ ಇಲಾಖೆ: ಉಪಲೋಕಾಯುಕ್ತರ ಕಚೇರಿ ಭೇಟಿ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳ ಸ್ವಚ್ಛತೆಯ ಸ್ಥಿತಿಗತಿಗಳ ಬಗ್ಗೆ, ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ, ಶುದ್ಧ ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ, ವಿದ್ಯಾರ್ಥಿಗಳಿಗೆ ನೀಡುವ ಉಚಿತ ಆರೋಗ್ಯ ತಪಾಸಣೆಯ ವಿವರಗಳ ಕುರಿತಂತೆ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ಹಾಗೂ ದಾಖಲೆಗಳನ್ನು ನೀಡದಿರುವ ಕಾರಣ ವಿವಿಧ ಅಧಿಕಾರಿಗಳ ವಿರುದ್ಧ ದೂರನ್ನು ದಾಖಲಿಸಲಾಗಿದೆ.
ತೆಂಕನಿಡಿಯೂರಿನ ಪೊಟ್ಟು ಕೆರೆಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಗ್ರಾಪಂ ಅಥವಾ ನಗರಸಭೆ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದು, ನಗರಸಭೆ ವಿವಿಧ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ, ಠಾಣಾ ವ್ಯಾಪ್ತಿಯಲ್ಲಿ ರುವ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಹಾಗೂ ಗಾಂಜಾ ತಯಾರು ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರಕದ ಹಿನ್ನೆಲೆ, ಠಾಣೆಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಸಾರಿಗೆ ಇಲಾಖೆ ವಿರುದ್ಧ: ಅದೇ ರೀತಿ ಮೀನುಗಾರಿಕೆ ಇಲಾಖೆಯ ಹಲವು ಅಧಿಕಾರಿಗಳ ವಿರುದ್ಧ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಲೋಕಾಯುಕ್ತರ ಪ್ರಶ್ನೆಗೆ ಸರಿಯಾದ ಉತ್ತರವನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಲು, ಖನಿಜಗಳನ್ನು ಸಾಗಿಸುವ ವಾಹನಗಳ ಕಣ್ಗಾವಲಿನ ಬಗ್ಗೆ ಚೆಕ್‌ಪೋಸ್ಟ್‌ಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಗಳು ಕೈಗೊಂಡಿರುವ ಕ್ರಮ, ಶಾಲಾವಾಹನಗಳು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಪಾಲಿಸುತ್ತಿ ರುವ ಬಗ್ಗೆ, ಚಾಲನಾ ಪರವಾನಗಿ, ಕಲಿಕೆಯ ಪರವಾನಗಿಯನ್ನು ಸಾರ್ವಜನಿಕರಿಗೆ ತರಿಸಿರುವ ಬಗ್ಗೆ ರಿಜಿಸ್ಟರ್‌ನ್ನು ಸರಿಯಾಗಿ ನಿರ್ವಹಿಸದೇ ಕರ್ತವ್ಯಲೋಪವೆಸಗಿರುವ ಕುರಿತಂತೆ ಸಂಬಂಧಪಟ್ಟ ಅಧಿಕಾರಿ ಗಳ ವಿರುದ್ಧ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರನ್ನು ದಾಖಲಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಎಷ್ಟು ರೆಸಾರ್ಟ್‌ಗಳು, ಲಾಡ್ಜ್‌ಗಳು ಹಾಗೂ ಹೋಮ್-ಸ್ಟೇಗಳು ತ್ಯಾಜ್ಯವನ್ನು ಕೆರೆಗಳಿಗೆ, ನದಿಗಳಿಗೆ ಹಾಗೂ ಸಮುದ್ರಕ್ಕೆ ಬಿಡುತ್ತಾ ಪರಿಸರವನ್ನು ಹಾನಿ ಮಾಡುತ್ತಿದ್ದಾರೆ ಎಂಬ ಬಗ್ಗೆ, ಜಿಲ್ಲೆಯಾದ್ಯಂತ ಎಷ್ಟು ರೆಸಾರ್ಟ್‌ಗಳು ಹಾಗೂ ಹೋಮ್-ಸ್ಟೇಗಳು ಬಪರ್ ವಲಯ ವ್ಯಾಪ್ತಿಯನ್ನು ಮೀರಿದ್ದಾರೆ ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ ಅಧಿಕಾರಿ ನೀಡದ ಬಗ್ಗೆ ಕರ್ತವ್ಯಲೋಪದ ಕುರಿತಂತೆ ದೂರು ದಾಖಲಿಸಲಾಗಿದೆ.
ಅದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಭೇಟಿಯ ವೇಳೆ ಹಲವು ನ್ಯೂನತೆಗಳು ಉಪ ಲೋಕಾಯುಕ್ತರ ಹಾಗೂ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹಾಗೂ ಕಡತಗಳ ವಿಲೇವಾರಿಯ ಕುರಿತಂತೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ವಸತಿ ಉದ್ದೇಶದ ಅರ್ಜಿ ಬಾಕಿ ಇರುವ ಬಗ್ಗೆ, ವಿನ್ಯಾಸ ಅನುಮೋದನೆಯ ಅರ್ಜಿಗಳನ್ನು ಬಾಕಿ ಇರಿಸಿಕೊಂಡಿರುವ ಬಗ್ಗೆ ಹಲವು ನ್ಯೂನ್ಯತೆಗಳಿರುವ ಕಾರಣ ಸಂಬಂಧ ಪಟ್ಟವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.
ತಾಲೂಕು ಕಚೇರಿಯಲ್ಲಿ ಅನಧಿಕೃತ ಚಿಟ್‌ಫಂಡ್
ಉಡುಪಿಯ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳ ತಂಡ ಆರ್.ಆರ್.ಟಿ. ಕಡತಗಳು, ತತ್ಕಾಲ್ ಪೋಡಿ ಕಡತಗಳು, ನಮೂನೆ 57, ಇ-ಪೌತಿ ಖಾತೆಗಳ ಕಡತಗಳು ವಿಲೇವಾರಿಗೆ ಬಾಕಿ ಇರುವ ಬಗ್ಗೆ, ಸರ್ಕಾರಿ ಕಛೇರಿಯಲ್ಲಿ ಅನಧಿಕೃತವಾಗಿ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿರು ವುದು ಹಾಗೂ ತಮ್ಮ ಮೇಲಾಧಿಕಾರಿ ಗಳಿಂದ ಚಿಟ್‌ಫಂಡ್ ಕಾಯ್ದೆಯಡಿಯಲ್ಲಿ ಯಾವುದೇ ಅನುಮತಿಯನ್ನು ಪಡೆಯದೇ ಇರುವುದು ಸೇರಿದಂತೆ ವಿವಿಧ ಕರ್ತವ್ಯಲೋಪಕ್ಕಾಗಿ ಸಂಬಂಧ ಪಟ್ಟವರ ವಿರುದ್ಧ ಸ್ವಯಂಪ್ರೇರಿತ ದೂರನ್ನು ದಾಖಲಿಸಲಾಗಿದೆ.
ಉಪ ನೋಂದಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳ ಕಡತವನ್ನು ನಿರ್ವಹಿಸದೇ ಇರುವ ಬಗ್ಗೆ, ಅಲ್ಲಿನ ಗುತ್ತಿಗೆ ನೌಕರರ ಸ್ವಂತ ಬ್ಯಾಗ್‌ನಲ್ಲಿ ಅನೇಕ ಖಾಸಗಿ ದಾಖಲೆಗಳು ಕಂಡು ಬಂದಿರುವ ಕಾರಣ ಹಲವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಗಣಿ ಮಾಹಿತಿ ಇಲ್ಲ!
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಕಚೇರಿಗೆ ಭೇಟಿ ನೀಡಿದ ವೇಳೆ, ಇಲಾಖೆಯ ಅಧಿಕಾರಿಗಳಿಗೆ ಜಿಲ್ಲೆಯಲ್ಲಿರುವ ಕ್ವಾರಿಗಳ ಸಂಖ್ಯೆ, ಪರವಾನಗಿ ಪಡೆದಿರುವ ಕ್ರಷರ್‌ಗಳ ಸಂಖ್ಯೆ, ಸ್ಥಳ ಪರಿಶೀಲನೆ ನಡೆಸಿ ಪರವಾ ನಗಿ ಉಲ್ಲಂಘನೆ ಬಾಬ್ತು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬಗ್ಗೆ, ಕ್ರಷರ್‌ಗಳು ಸರಕಾರಿ ಭೂಮಿ/ಪಟ್ಟಾ ಭೂಮಿಯಲ್ಲಿವೆಯೇ, ಇವುಗಳಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿ ರುವ ಬಗ್ಗೆ, ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸದಿರುವ ಕ್ವಾರಿಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ.
ಅಲ್ಲದೇ ಗಣಿ ಮತ್ತು ಕ್ರಷರ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿಮೆ ಮಾಡಿಸಿರುವ ಬಗ್ಗೆ, ಗಣಿಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿ ಜಿಪಿಎಸ್ ನಿರ್ದೇಶಾಂಕಗಳು ಇರುವ ಕುರಿತಂತೆ ಲೋಕಾಯುಕ್ತರ ಹಲವು ಪ್ರಶ್ನೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲು ವಿಫಲರಾಗಿದ್ದರು. ಹೀಗೆ ಅಧಿಕಾರಿಗಳ ಕರ್ತವ್ಯದಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಇಲಾಖೆಯ ಹಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ದಾಖಲಿಸಲಾಗಿದೆ.






