ಜ.3ರಂದು ಸೂರ್ಯ, ಚಂದ್ರರ ಬಹಳ ಅಪರೂಪದ ಸಂಗಮ!

ಉಡುಪಿ, ಜ.2: ಭೂಮಿಗೆ ಸೂರ್ಯ ಮತ್ತು ಚಂದ್ರರ ಬಹಳ ಅಪರೂಪದ ಸಂಗಮ ಜ.3ರಂದು ನಡೆಯಲಿದೆ. ಅತೀ ವಿರಳವಾಗಿರುವ ಈ ಸಂದರ್ಭ ಖಗೋಳದಲ್ಲಿ ಬಹಳ ವಿಶೇಷ ದಿನವಾಗಿದೆ.
ಈ ದಿನ ಸೂರ್ಯ ಸುಮಾರು 30 ಲಕ್ಷ ಕಿಮೀ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣಲಿದೆ. ಚಂದ್ರ ಕೂಡ ಸುಮಾರು 27ಸಾವಿರ ಕಿಮೀ ಸಮೀಪ ಬಂದು ದೊಡ್ದಾಗಿ ಕಾಣಲಿದೆ. ಈ ಘಟನೆ ಒಂದೇ ದಿನ ನಡೆಯುವುದೇ ವಿಶೇಷವಾಗಿದೆ.
ಜ.3ರಂದು ಹುಣ್ಣಿಮೆ ಹಾಗೂ ಸೂಪರ್ ಮೂನ್. ಇದು ಈ ವರ್ಷದ ಪ್ರಥಮ ಸೂಪರ್ ಮೂನ್. ಸೂಪರ್ ಮೂನ್‌ನಿಂದಾಗಿ ಹುಣ್ಣಿಮೆಯ ಚಂದ್ರ ಭೂಮಿಗೆ ಸುಮಾರು 27000 ಕಿಮೀ ಸಮೀಪ ಬಂದು 14 ಅಂಶ ದೊಡ್ಡದಾಗಿ, ಸುಮಾರು 30 ಅಂಶ ಹೆಚ್ಚಿನ ಹುಣ್ಣಿಮೆಯ ಬೆಕಿನಿಂದ ಬೆಳಗುತ್ತದೆ.
ಸೂರ್ಯನಲ್ಲೂ ಇಂದು ವರ್ಷದ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣ ದಿಂದ ಜ.3ರಂದು ಸಮೀಪ ದೂರ (ಪೆರಿಜಿಗೆ ) ಭೂಮಿ ಬಂದು, ಸರಾಸರಿ ದೂರ 15 ಕೋಟಿ ಕಿಮೀ ಕ್ಕಿಂತ 14 ಕೋಟಿ 70 ಲಕ್ಷ ಕಿಮೀಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಗೆ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಮಾಮೂಲಿಗಿಂತ ದೊಡ್ಡದಾಗಿ ಕಾಣುತ್ತದೆ.
ಈ ವರ್ಷ ಭೂಮಿ ಜ.3 ಪೆರಿಜಿಗೆ ಮತ್ತು ಜು.6ರಂದು ಅಪೊಜಿಗೆ ಬರಲಿದೆ. ಸೂರ್ಯ ಸುತ್ತ ತಿರುಗುವ ಭೂಮಿ ಹಾಗೂ ಭೂಮಿಯ ಸುತ್ತ ತಿರುಗುವ ಚಂದ್ರ ಪಥ ವರ್ತುಲವಲ್ಲದೇ ದೀರ್ಘವೃತ್ತಾಕಾರವಾಗಿರುವುದೇ ಈ ಎಲ್ಲ ಸುಂದರ ಖಗೋಳ ವಿದ್ಯಾಮಾನಗಳಿಗೆ ಕಾರಣ. ಅದರಲ್ಲೂ ಈ ವರ್ಷ ಜ.3ರಂದು ಹುಣ್ಣಿಮೆ ಬಂದು ಸೂಪರ್ ಮೂನ್ ಆಗಿರುವುದು ವಿಶೇಷ ಎಂದು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉಡುಪಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.







