ಎತ್ತಿನ ಹೊಳೆ ಯೋಜನೆಯ ವೈಜ್ಞಾನಿಕ ಸಮೀಕ್ಷೆಗೆ ಆಪ್ ಒತ್ತಾಯ
ಮಂಗಳೂರು, ಜೂ.17: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಎತ್ತಿನ ಹೊಳೆ ಯೋಜನೆಯ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಕರಾವಳಿಯ ಪರಿಸರ ವ್ಯವಸ್ಥೆ ರಕ್ಷಿಸಲು ಖಚಿತವಾದ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಉಡುಪಿಯ ವಾರಾಹಿ ನೀರಾವರಿ ಯೋಜನೆ, ಎಡದಂಡೆ ಕಾಲುವೆ ಯೋಜನೆ ಅಕ್ವಿಡಕ್ಟ್ ಯೋಜನೆಗೆ ಈಗಾಗಲೇ ಸಾವಿರಾರು ಕೋಟಿ ರೂ. ಖರ್ಚು ಮಾಡಿ 40 ವರ್ಷ ಕಳೆದರೂ ಯೋಜನೆಗಳು ಅಪೂರ್ಣವಾಗಿಯೇ ಉಳಿದಿವೆ. ಈ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಇನ್ನೂ 15 ವರ್ಷಗಳು ಬೇಕಾಗಬಹುದು ಎಂದವರು ಆಕ್ಷೇಪಿಸಿದರು.
2012ರಲ್ಲಿ ಆರಂಭಗೊಂಡ ಯೋಜನೆಗೆ 9000 ಕೋಟಿ ರೂ. ಬಜೆಟ್ ನಿಗದಿಪಡಿಸಲಾಗಿತ್ತು. ಬಳಿಕ ಅದು 13,000 ಕೋಟಿ ರೂ.ಗಳಿಗೆ ಏರಿಕೆಯಾಗಿ ಇದೀಗ ಯೋಜನೆ ಅಂತಿಮ ವೆಚ್ಚ 23000 ಕೋಟಿ ರೂ.ಗೆ ತಲುಪುವ ನಿರೀಕ್ಷೆ ಇದೆ. ಈಗಾಗೇ 16,000 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಇನ್ನೂ ಪ್ರಥಮ ಹಂತದ ಯೋಜನೆಯೇ ಪೂರ್ಣಗೊಂಡಿಲ್ಲ. ಜನರ ತೆರಿಗೆ ದುಡ್ಡು ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಯೋಜನೆಯು ಬೆಂಗಳೂರು ಗ್ರಾಮಾಂತರ ಸೇರಿದಂತೆ ಏಳು ಜಿಲ್ಲೆಗಳಿಗೆ ನೀರನ್ನು ಒದಗಿಸಲಿದ್ದು,ವಾರ್ಷಿಕ 24 ಟಿಎಂಸಿ ನೀರು ಲಭ್ಯವಾಗಲಿದೆ ಎಂದು ಸರಕಾರ ಪ್ರತಿಪಾದಿಸಿದೆ. ಆದರೆ ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ ಲಭ್ಯವಾಗುವ ನೀರಿನ ಪ್ರಮಾಣ 9.55 ಟಿಎಂಸಿ ಮಾತ್ರ ಎಂದು ಹೇಳಲಾಗಿದೆ. ಈ ಭಿನ್ನಾಭಿಪ್ರಾಯವು ಪರಿಸರ ಮತ್ತು ನಿರ್ವಹಣೆ ದೃಷ್ಟಿಯಿಂದ ಆತಂಕ ಸೃಷ್ಟಿಸಿದೆ. ಅದರಲ್ಲೂ ಇದು ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿ ನದಿ ಪಾತ್ರದ ಮೇಲೆ ಪ್ರಭಾವ ಬೀರುವ ಕಳವಳ ವ್ಯಕ್ತವಾಗಿದೆ. ಇದು ಈ ಭಾಗದ ಶ್ರೀಮಂತ ಜೀವವೈವಿಧ್ಯಕ್ಕೆ ಹಾನಿ ಉಂಟು ಮಾಡಬಹುದು ಎಂದು ಹೇಳಲಾಗಿದೆ. ಮಂಗಳೂರು ನಗರವು ಕುಡಿಯುವ ನೀರಿಗೆ ತುಂಬೆ ಅಣೆಕಟ್ಟನ್ನು ಆಶ್ರಯಿಸಿದೆ. ಆದರೆ ಮೇಲ್ಭಾಗದಲ್ಲಿ ನೀರನ್ನು ಪಂಪ್ ಮಾಡುವುದರಿಂದ ಅಣೆಕಟ್ಟಿಗೆ ಹರಿದು ಬರುವ ನೀರಿನಲ್ಲಿ ಕೊರತೆಯಾಗಿ ಬೇಸಿಗೆಯಲ್ಲಿ ನೇತ್ರಾವತಿ ನದಿ ಒಣಗಿ ಹೋಗುವ ಭೀತಿ ಇದೆ. ಹಾಗಾಗಿ ಈ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಅವರು ಆಗ್ರಹಿಸಿದರು.
ಗೋಷ್ಟಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೋ, ಮಹಿಳಾ ಘಟಕ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿ ವಾಸುದೇವ್, ಜಿಲ್ಲಾ ಕಾರ್ಯದರ್ಶಿ ಕಬೀರ್ ಕಾಟಿಪಳ್ಳ, ಶಾಲೆಟ್ ಪಿಂಟೋ, ಲೆಸ್ಲಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.






