ವಿಶ್ವಮಟ್ಟದ ಚೆಸ್ ಪಂದ್ಯಾವಳಿಗೆ ಆರಾಧ್ಯ ಶೆಟ್ಟಿ ಆಯ್ಕೆ

ಕುಂದಾಪುರ, ಜ.2: ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಬ್ರಹ್ಮಾವರ ಲಿಟಲ್ ರಾಕ್ ಶಾಲೆ 9ನೆ ತರಗತಿ ವಿದ್ಯಾರ್ಥಿನಿ ಆರಾಧ್ಯ ಎಸ್.ಶೆಟ್ಟಿ ಬೆಳ್ಳಿ ಪದಕ ಗೆದ್ದು ವಿಶ್ವಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಕುಂದಾಪುರ ಕಶ್ವಿ ಚೆಸ್ ಸ್ಕೂಲ್‌ನ ನರೇಶ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಳ್ವಾಡಿ ಗ್ರಾಮದ ಶ್ರೀಕಾಂತ್ ಶೆಟ್ಟಿ, ಉಷಾಲತಾ ಶೆಟ್ಟಿ ಅವರ ಪುತ್ರಿ ಆರಾಧ್ಯ 2019ರಲ್ಲಿ ಕಶ್ವಿ ಚೆಸ್ ಸ್ಕೂಲ್ ಮೂಲಕ ಮೊದಲ ಅಂತಾರಾಷ್ಟ್ರೀಯ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ, 2025 ನವಂಬರ್‌ನಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಚೆಸ್ ಚಾಂಪಿಯನ್ ಶಿಪ್‌ನ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಅಸ್ಸಾಂನಲ್ಲಿ ನಡೆದ ರಾಷ್ಟ ಮಟ್ಟದ ಅಂಡರ್-17 ವಿಭಾಗದಲ್ಲಿ ನಡೆದ 9 ಸುತ್ತಿನ ಪಂದ್ಯಗಳಲ್ಲಿ 7 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಎಪ್ರಿಲ್ ತಿಂಗಳಿನಲ್ಲಿ ನಡೆಯಲಿ ರುವ ವಿಶ್ವಮಟ್ಟದ ಚೆಸ್ ಸ್ಕೂಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.





