ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡದಿದ್ದರೆ ಕ್ರಮ : ಡಿಸಿ

ಉಡುಪಿ : ಖಾಸಗಿ ಬಸ್‌ಗಳು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಬಾಗಿಲುಗಳನ್ನು ಅಳವಡಿಸಿ ಕಡ್ಡಾಯವಾಗಿ ಬಾಗಿಲು ಹಾಕಬೇಕು. ಹಿರಿಯನಾಗರಿಕರು, ಅಂಗವಿಕಲರು ಹಾಗೂ ಮಹಿಳೆಯರ ಸೀಟುಗಳಲ್ಲಿ ಬೇರೆಯವರಿಗೆ ಅವಕಾಶ ನೀಡದೆ ನಿಯಮ ಪಾಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಖಾಸಗಿ ಬಸ್‌ಗಳಲ್ಲಿ ಡೋರ್ ಇಲ್ಲ. ಇದ್ದರೂ ಕೆಲವು ಬಸ್‌ಗಳಲ್ಲಿ ಡೋರ್ ಹಾಕುವುದಿಲ್ಲ ಎಂದು ಸಾರ್ವಜನಿಕರು ಸಭೆಯಲ್ಲಿ ದೂರಿದರು. ಪಡುಕೋಣೆ ಮಾರ್ಗದಲ್ಲಿ ಮಧ್ಯಾಹ್ನ ವೇಳೆ ಬಸ್ ಇಲ್ಲ. ಇದರಿಂದ ಒಂದೂವರೆ ಕಿ.ಮೀ. ದೂರ ನಡೆದುಕೊಂಡು ಹೋಗಬೇಕಾಗುತ್ತದೆ. ಪ್ರತಿದಿನ ರಿಕ್ಷಾಕ್ಕೆ ಹಣ ನೀಡಲು ನಮ್ಮಿಂದ ಅಸಾಧ್ಯ. ಆದುದರಿಂದ ಈ ಮಾರ್ಗದಲ್ಲಿ ಸರಕಾರಿ ಬಸ್ ಆರಂಭಿಸಬೇಕೆಂದು ವಿದ್ಯಾರ್ಥಿನಿಯೊಬ್ಬಳು ಮನವಿ ಮಾಡಿದರು.
ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೊಲ್ಲೂರಿಗೆ ಯಾವುದೇ ಸರಕಾರಿ ಬಸ್ ವ್ಯವಸ್ಥೆ ಇಲ್ಲ ಎಂದು ಸಾರ್ವಜನಿಕರು ದೂರಿದರು. ಈಗ ಇರುವ ಕೊಲ್ಲೂರು- ಬೆಂಗಳೂರು ಮಾರ್ಗದಲ್ಲಿ ಓಡಾಡುತ್ತಿರುವ ರಾಜಹಂಸ ಬಸ್ ಬದಲು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಡ್ಡಾಯ ನಿಲುಗಡೆಗೆ ಸೂಚನೆ :
ಮರವಂತೆ ಬಸ್ ನಿಲ್ದಾಣದಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ಗಳು ನಿಲುಗಡೆ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಎಲ್ಲ ಬಸ್ ನಿಲ್ದಾಣಗಳಲ್ಲಿಯೂ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಕಡ್ಡಾಯವಾಗಿ ನಿಲ್ಲಿಸಬೇಕು. ನಿಲ್ಲಿಸದ ಬಸ್‌ಗಳ ಬಗ್ಗೆ ದೂರು ಬಂದರೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಂದಾಪುರ- ನೂಜಾಡಿ ಮಾರ್ಗದಲ್ಲಿ ಬಸ್ ಓಡಾಟ ಮಾಡುತ್ತಿಲ್ಲ. ಕೇವಲ ಮೂರು ಕಿ.ಮೀ. ಮಾತ್ರ ಬಸ್ ಬರುತ್ತದೆ. ಉಳಿದ ಮಾರ್ಗದಲ್ಲಿ ಬಸ್‌ಗಳಿಲ್ಲ. ಈ ಮಾರ್ಗದಲ್ಲಿ ಸರಕಾರಿ ಬಸ್‌ಗಳಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜೀವ ಪಡುಕೋಣೆ ಆಗ್ರಹಿಸಿದರು.
ಕೊಲ್ಲೂರು- ಬೈಂದೂರು ಮಾರ್ಗದಲ್ಲಿ ಯಾವುದೇ ಸರಕಾರಿ ಬಸ್‌ಗಳಿಲ್ಲ. ಖಾಸಗಿ ಬಸ್‌ಗಳು ಸೀಸನ್‌ನಲ್ಲಿ ಮದುವೆ ಟ್ರೀಪ್‌ಗೆ ಆದ್ಯತೆ ನೀಡುತ್ತದೆ. ಆ ಸಂದರ್ಭದಲ್ಲಿ ಸಾರ್ವಜನಿಕರು ತೀರಾ ತೊಂದರೆ ಅನುಭವಿಸಬೇಕಾ ಗುತ್ತದೆ ಎಂದು ಸಾರ್ವಜನಿಕರು ದೂರಿದರು.
ಉಡುಪಿ ಬಾರಕೂರು ಮಂದರ್ತಿ ಮಾರ್ಗದಲ್ಲಿ 9 ಸರಕಾರಿ ಬಸ್‌ಗಳಿಗೆ ಪರವಾನಿಗೆ ಇದೆ. ಮತ್ತೆ ಐದು ಪರವಾನಿಗೆ ಕೇಳಲಾಗಿದೆ. ಹೀಗೆ ಈ ಮಾರ್ಗದಲ್ಲಿ ಸರಕಾರಿ ಬಸ್ ಓಡಾಟ ಮಾಡಿದರೆ ಖಾಸಗಿಯವರು ಬೀದಿಪಾಲಾಗಬೇಕಾಗುತ್ತದೆ. ಸರಕಾರಿ ಬಸ್‌ನಲ್ಲಿ ಶಕ್ತಿ ಯೋಜನೆ ಇರುವುದ ರಿಂದ ಖಾಸಗಿ ಬಸ್‌ಗಳಲ್ಲಿ ಮಹಿಳೆಯರು ಬರುವುದಿಲ್ಲ ಎಂದು ಖಾಸಗಿ ಬಸ್ ಮಾಲಕರೊಬ್ಬರು ಅಳಲು ತೋಡಿಕೊಂಡರು. ಹೆಬ್ರಿ -ಮಂದರ್ತಿ ಮಾರ್ಗದಲ್ಲಿ ಸರಕಾರಿ ಬಸ್ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರೊಬ್ಬರು ಆಗ್ರಹಿಸಿದರು.
ಓವರ್‌ಲೋಡ್ ವಿರುದ್ಧ ಕ್ರಮ: ಬೆಳಗ್ಗೆ ಹಾಗೂ ಸಂಜೆಯ ಪ್ರಮುಖ ಸಮಯಗಳಲ್ಲಿ ಸರಕಾರಿ ಮತ್ತು ಖಾಸಗಿ ಎರಡೂ ಬಸ್‌ಗಳಲ್ಲಿ ಓವರ್ ಲೋಡ್ ಇರುತ್ತದೆ. ಅದಕ್ಕಾಗಿ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಎಲ್ಲ ಶಾಲೆಗಳ ಆರಂಭ ಸಮಯ ಒಂದೇ ರೀತಿ ಆಗಿರುವುದರಿಂದ ಬಸ್‌ಗಳಲ್ಲಿ ವಿದ್ಯಾರ್ಥಿಗಳು ತುಂಬಿ ಹೋಗುತ್ತಾರೆ. ಅದಕ್ಕೆ ಶಾಲಾ ಸಮಯವನ್ನು ಬದಲಾವಣೆ ಮಾಡಬೇಕು. ಅದೇ ರೀತಿ ಆಯಾ ಶಾಲೆಗಳಿಂದ ಬಸ್ ವ್ಯವಸ್ಥೆ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಖಾಸಗಿ ಬಸ್ ಮಾಲಕರು ಸಲಹೆ ನೀಡಿದರು.
ನಿಟ್ಟೆ ಕಾಲೇಜೊಂದರ ವಿದ್ಯಾರ್ಥಿ ತುಂಬಿದ ಬಸ್‌ನಲ್ಲಿ ನೇತಾಡಿಕೊಂಡು ಹೋದ ಪರಿಣಾಮ ಬಿದ್ದು ಮೃತಪಟ್ಟ ಘಟನೆ ಕೆಲವು ವರ್ಷಗಳ ಹಿಂದೆ ನಡೆದಿದ್ದು, ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ರಮವಾಗಿ 5200, 7300, 1062 ಓವರ್ ಲೋಡ್ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದರು.
ಸಭೆಯಲ್ಲಿ ಪ್ರಭಾರ ಆರ್‌ಟಿಓ ಸಂತೋಷ್ ಶೆಟ್ಟಿ, ಬಸ್ ಮಾಲಕ ಸದಾನಂದ ಛಾತ್ರ, ಸುರೇಶ್ ನಾಯಕ್ ಕುಯಿಲಾಡಿ, ಸಿಐಟಿಯು ಮುಖಂಡರಾದ ಕವಿರಾಜ್, ಶಶಿಧರ್ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.
ಬಸ್ ಓಡಿಸದಿದ್ದರೆ ಕ್ರಮ: ಎಸ್ಪಿ
ಖಾಸಗಿಯಾಗಲೀ ಸರಕಾರಿ ಬಸ್ ಆಗಲಿ ಪರವಾನಿಗೆ ಪಡೆದು ಆ ಮಾರ್ಗದಲ್ಲಿ ಓಡದೇ ಇದ್ದರೆ ಅಂತಹ ಬಸ್‌ಗಳ ಮಾಹಿತಿಯನ್ನು ಸಾರ್ವಜನಿಕರು ನಮಗೆ ನೀಡಬೇಕು. ಅಂತಹ ಬಸ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದರು.
ಸಮಯ, ಮಾರ್ಗದ ಸಣ್ಣ ವಿಚಾರಗಳಿಗಾಗಿ ಸರಕಾರಿ ಬಸ್‌ಗಳಿಗೆ ಖಾಸಗಿ ಬಸ್‌ನವರು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತರುವುದು ಸರಿಯಲ್ಲ. ಕ್ಷುಲ್ಲಕ ವಿಚಾರಕ್ಕೆ ಕಾನೂನು ಕ್ರಮಕ್ಕೆ ಮುಂದಾದರೆ, ನಾವು ಕೂಡ ಕಾನೂನು ಉಲ್ಲಂಘಿಸುವುವ ಖಾಸಗಿ ಬಸ್‌ಗಳು ವಿರುದ್ದ ಕ್ರಮ ಜರಗಿಸಬೇಕಾಗುತ್ತದೆ ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಪರವಾನಿಗೆಗೆ ಮುನ್ನಾ ಜಂಟಿಸರ್ವೆ
ಯಾವುದೇ ಮಾರ್ಗದಲ್ಲೂ ಕೆಎಸ್‌ಆರ್‌ಟಿಸಿ ಬಸ್‌ಗೆ ಪರವಾನಿಗೆ ನೀಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಮೊದಲು ಜಂಟಿ ಸರ್ವೆ ಮಾಡಬೇಕು. ಕೆಲವು ಮಾರ್ಗದಲ್ಲಿ ಜಂಟಿ ಸರ್ವೆ ಆಗಿಲ್ಲ. ಆ ಕಾರಣಕ್ಕಾಗಿಯೇ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ ಎಂದು ಖಾಸಗಿ ಬಸ್ ಮಾಲಕರು ದೂರಿದರು.
ಇದಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಜಂಟಿ ಸರ್ವೆ ಮಾಡಿರುವುದಾಗಿ ಸಮರ್ಥಿಸಿಕೊಂಡರು. ಸಿಐಟಿಯು ಮುಖಂಡ ರಾಜು ಪಡುಕೋಣೆ ಮಾತನಾಡಿ, ಪರವಾನಿಗೆ ಪಡೆದ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಓಡಿಸುತ್ತಿಲ್ಲ. ಮಾಲಕರು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು. ಮುಂದೆ ಜಂಟಿ ಸರ್ವೆ ಮಾಡದೆ ಯಾವುದೇ ಪರವಾನಿಗೆ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.







