57ರ ಹರೆಯದ ಕುಂದಾಪುರದ ಮಹಿಳೆಯಿಂದ ಸಾಹಸ: 1300 ಕಿ.ಮೀ ದೂರ ಬೈಕ್ ಸವಾರಿ

ಉಡುಪಿ, ಆ.17: ಈ ಹಿಂದೆ ಮಗಳೊಂದಿಗೆ ಬೈಕ್‌ನಲ್ಲಿ ಜಗತ್ತಿನ ಅತಿ ಎತ್ತರದ ಪ್ರದೇಶವಾದ ಉಮ್ಲಿಂಗ್ ಪಾಸ್‌ಗೆ ತೆರಳಿ ಗಮನ ಸೆಳೆದಿದ್ದ 57ರ ಹರೆಯದ ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ, ಇದೀಗ ಮತ್ತೊಂದು ಸಾಹಸಮಯ ಸಾಧನೆ ಮಾಡಿದ್ದಾರೆ.
ಇವರು 8 ದಿನಗಳಲ್ಲಿ 1300 ಕಿ.ಮೀ. ದೂರ ಬೈಕ್ ರೈಡ್ ಮಾಡಿ ಚೀನಾ ಗಡಿ ಸಮೀಪದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿ ವಿಶಿಷ್ಟ ಸಾಧನೆ ಮೆರೆದಿದ್ದಾರೆ. ಇವರು 2023ರಲ್ಲಿ ತನ್ನ ಪುತ್ರಿ ಚೆರಿಶ್ ಕರ್ವಾಲೋ ಜತೆಗೂಡಿ ಬೈಕ್‌ನಲ್ಲಿ ಜಗತ್ತಿನ ಅತಿ ಎತ್ತರದ ಪ್ರದೇಶವಾದ ಉಮ್ಲಿಂಗ್ ಪಾಸ್‌ಗೆ ತೆರಳಿದ್ದರು.
ಕುಂದಾಪುರ ಮೂಲದ ವಿಲ್ಮಾ ಅವರಿಗೆ ಬೈಕ್ ರೈಡ್ ಹವ್ಯಾಸ. ಹಲವು ಬಾರಿ ತಮ್ಮ ಪುತ್ರಿ ಚೆರಿಶ್ ಕರ್ವಾಲೋ ಜೊತೆ ಬೈಕ್ ರೈಡ್ ಮಾಡಿದ್ದಾರೆ. ಕಾರ್ಪೋರೇಟರ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿರುವ ಇವರು ಬೈಕ್ ನಲ್ಲಿ ಹಿಮಾಲಯ ಪರ್ವತದ ಹಾದಿಯಲ್ಲಿ ಪ್ರಯಾಣ ಮಾಡುವ ಹವ್ಯಾಸ ಹೊಂದಿದ್ದಾರೆ.
ಇವರು ಈ ಬಾರಿ ಸಿಯಾಚಿನ್‌ನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಮಾಡುವ ಗುರಿ ಇಟ್ಟುಕೊಂಡು ಎಂಟು ದಿನಗಳಲ್ಲಿ 1300 ಕಿಲೋಮೀಟರ್ ನಷ್ಟು ಪ್ರಯಾಣ ಮಾಡಿದ್ದಾರೆ. ಪ್ರಯಾಣ ಅತಿ ಕಠಿಣವಾಗಿದ್ದುದರಿಂದ ಅವರು ಅಲ್ಲಿ ಬೆಳಿಗ್ಗೆ ಹೊತ್ತು ತಲುಪಿ ಧ್ವಜಾರೋಹಣ ಮಾಡುವ ಕನಸಿಗೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೂ ಮಧ್ಯಾಹ್ನ ವೇಳೆಗೆ ಅಲ್ಲಿ ಅವರು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ವಿಲ್ಮಾ 6 ಜನರ ತಂಡದ ಜೊತೆ ಈ ಪ್ರಯಾಣ ಮಾಡಿದ್ದರು.
‘ಲೇಹ್‌ನಿಂದ ಝನ್ಸ್ಕರ್ ಕಣಿವೆ ಮೂಲಕ ಕಾರ್ಗಿಲ್ ಸಮೀಪದ ಗುರ್ಖೋನ್ ಕಣಿವೆ ಆಗಿ ಸಿಯಾಚಿನ್ ತಲುಪಿದ್ದೇವೆ. ಗುರಿ ತಲುಪಲು 60ಕಿ.ಮೀ. ಇರುವಾಗಲೇ ಪ್ರಯಾಣ ನಿಲ್ಲಿಸುವ ಮನಸ್ಸು ಮಾಡಿದ್ದೇವು. ಆದರೆ ಹಠ ಹಿಡಿದು ಈ ಯಾತ್ರೆ ಪೂರ್ಣಗೊಳಿಸಿದ್ದೇವೆ. ಇದರಿಂದ ನಮಗೆ ತುಂಬ ಖುಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.







