ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿ ಯೋಜನೆ: ಸಚಿವ ಸತೀಶ ಜಾರಕಿಹೊಳಿ ವೀಕ್ಷಣೆ, ಸಾಧಕ-ಬಾಧಕ ಸಮೀಕ್ಷೆ

ಉಡುಪಿ, ಜು.15: ಕರಾವಳಿ ಭಾಗಕ್ಕೆ ಮಲೆನಾಡು, ಬಯಲುಸೀಮೆ ಯೊಂದಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ರಸ್ತೆಯ ಸರ್ವಾಂಗೀಣ ಅಭಿವೃದ್ಧಿ ಯೋಜನೆ ಬಹುಕಾಲದಿಂದ ಚರ್ಚೆಯಲ್ಲಿದ್ದು, ಈ ಬಗ್ಗೆ ಖುದ್ದಾಗಿ ವೀಕ್ಷಿಸಿ, ಘಾಟ್ ರಸ್ತೆ ವಿಸ್ತರಣೆಯ ವಿಧಾನ, ಅದರ ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಳ್ಳಲು ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವ ಸತೀಶ ಜಾರಕಿಹೊಳಿ ಅವರು ಬುಧವಾರ ಅಧಿಕಾರಿಗಳ ತಂಡದೊಂದಿಗೆ ಆಗುಂಬೆ ಘಾಟ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರಾವಳಿಗೆ ರಾಜ್ಯದ ಉಳಿದ ಭಾಗದೊಂದಿಗೆ ಸಂಪರ್ಕ ಕಲ್ಪಿಸುವ ಅತೀ ಸಮೀಪದ ರಸ್ತೆಯಾದ ಆಗುಂಬೆ ಘಾಟ್ ನಲ್ಲಿ ಮಿನಿ ಬಸ್‌ಗಳು ಹಾಗೂ ಲಘು ವಾಹನಗಳೇ ಹೆಚ್ಚಾಗಿ ಸಂಚರಿಸುತ್ತವೆ. ಘಟ್ಟದ ಮೇಲಿನ ಜನರು ಉತ್ತಮ ಆರೋಗ್ಯ ಸೇವೆ ಹಾಗೂ ಶಿಕ್ಷಣ ಪಡೆಯಲು ಕರಾವಳಿಗೆ ಬರಲು ಹೆಚ್ಚಾಗಿ ಇದೇ ಮಾರ್ಗವನ್ನು ಬಳಸುತ್ತಾರೆ. ಹೀಗಾಗಿ ಈ ಘಾಟ್ ರಸ್ತೆಯ ಕೆಲವೊಂದು ಸ್ಥಳಗಳ ಅಗಲೀಕರಣ, ರಕ್ಷಣಾ ಗೋಡೆಗಳ ನಿರ್ಮಾಣ ಸೇರಿದಂತೆ ವಿವಿಧ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಪರಿಶೀಲನೆ ನಡೆಸಿದ ಸಚಿವರು, ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿಗಳನ್ನು ಕೇಳಿ ಪಡೆದರು.
ಆಗುಂಬೆ ಘಾಟ್‌ನಲ್ಲಿ ಶಿವಮೊಗ್ಗದ ಕಡೆಯಿಂದ ಬರುವ ಘಾಟ್‌ನ ಆರಂಭದಲ್ಲಿ ಹಾಗೂ 5, 6 ಮತ್ತು 7ನೇ ತಿರುವು ಸೇರಿದಂತೆ ಮೂರು ನಾಲ್ಕು ಕಡೆಗಳಲ್ಲಿ ತುರ್ತಾಗಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ನೀಲನಕ್ಷೆಗೆ ಟೆಂಡರ್: ಈಗಾಗಲೇ ಬಹು ಚರ್ಚೆಯಲ್ಲಿರುವ ಆಗುಂಬೆ ಸುರಂಗ ಮಾರ್ಗ ನಿರ್ಮಾಣ ಕುರಿತು ಇದುವರೆಗೆ ಎರಡು ಬಾರಿ ನೀಲನಕ್ಷೆ ತಯಾರಿಸಲು ಟೆಂಡರ್ ಕರೆಯಲಾಗಿದೆ. ಆದರೆ ಯಾವುದೇ ಸಂಸ್ಥೆಗಳು ಮುಂದೆ ಬಂದಿಲ್ಲ. ಟನಲ್ ನಿರ್ಮಾಣದ ಕಾಮಗಾರಿ ತುಂಬಾ ದುಬಾರಿಯಾಗುತ್ತದೆ ಎಂದ ಅವರು, ಕಳೆದ 70 ವರ್ಷಗಳಲ್ಲಿ ಈ ರೀತಿಯ ಅನೇಕ ಡಿಪಿಆರ್ ಮಾಡಲಾಗಿದೆ. ಆದರೆ ಅದು ಜಾರಿಯಾಗಬೇಕಲ್ಲ ಈ ಬಗ್ಗೆ ಪ್ರಶ್ನಿಸಿದಾಗ ನುಡಿದರು.
ಮಳೆಗಾಲದಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ಘಾಟಿಯ ರಸ್ತೆಗಳಲ್ಲಿ ಭೂಕುಸಿತವಾಗದಂತೆ ತಡೆಯಲು, ವಾಹನ ಗಳು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು ಕೈಗೊಳ್ಳಬೇಕಾಗಿರುವ ವೈಜ್ಞಾನಿಕ ರಸ್ತೆ ಸುಧಾರಣೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಅವರು ಸಮಗ್ರ ಮಾಹಿತಿಯನ್ನು ಪಡೆದರು.
ಇತ್ತೀಚಿನ ದಿನಗಳಲ್ಲಿ ಬಾಳೆಬಾರೆ ಘಾಟ್ ರಸ್ತೆಯಲ್ಲಿ ಭೂಕುಸಿತವಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಪರಿಣಾಮವಾಗಿ ಆಗುಂಬೆ ಘಾಟಿಯಲ್ಲಿ ಮಳೆ, ಕಿರಿದಾದ ರಸ್ತೆ ಹಾಗೂ ವಾಹನ ಸಂಚಾರ ಹೆಚ್ಚಳದಿಂದ ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಆಗುಂಬೆ ಘಾಟ್ ರಸ್ತೆಯಲ್ಲಿ ಅತೀ ಅವಶ್ಯಕವಾದ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಸಚಿವರು ಪ್ರಕಟಿಸಿದರು.
ಆಗುಂಬೆ ಘಾಟ್‌ನಲ್ಲಿ ಪ್ರತೀ ವರ್ಷವೂ ಸಹ ಹೆಚ್ಚಿನ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತವಾಗಿ ರಸ್ತೆ ಬಂದ್ ಆಗುತ್ತಿದೆ. ಇದಕ್ಕೆ ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅಭಿಯಂತರರುಗಳೊಂದಿಗೆ ಚರ್ಚಿಸಿ, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನಲ್ಲಿ ಸಭೆ: ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇದು ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವುದರಿಂದ ಕಾಮಗಾರಿಗೆ ಬಹುದೊಡ್ಡ ತೊಡಕಾಗಿದೆ. ಕಾಮಗಾರಿಗೆ ಅಡಚಣೆಯಾಗುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವುದರೊಂದಿಗೆ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿ ಕೊಳ್ಳಲಾಗುವುದು. ಈ ಬಗ್ಗೆ ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಯಾವ ರೀತಿಯಲ್ಲಿ ರಸ್ತೆ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಆಗುಂಬೆಯ ಸನ್‌ಸೆಟ್ ವ್ಯೆ ಪಾಯಿಂಟ್‌ನಲ್ಲಿ ಜಿಲ್ಲೆಯ ಪತ್ರಕರ್ತರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಈ ಬಾರಿ ಮುಂಗಾರು ಮಳೆ ನಿರೀಕ್ಷೆಗಿಂತ ತುಂದಾ ಕಡಿಮೆ ಪ್ರಮಾಣ ದಲ್ಲಿದೆ. ಆದರೆ ಇದುವರೆಗೆ ಬಂದಿರುವ ಮಳೆಯಿಂದ ಮುಂದಿನ ಜೂನ್‌ವರೆಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾದ್ಯತೆ ಇಲ್ಲ. ಆದರೆ, ಇನ್ನು 10 ದಿನದ ಒಳಗೆ ಮಳೆ ಬಾರದಿದ್ದಲ್ಲಿ ಬೆಳೆಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ ಎಂದರು.
ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರು ಸಂಚರಿಸಲು ಅನುಕೂಲ ವಾಗುವಂತೆ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಕಾಲುಸಂಕಗಳ ನಿರ್ಮಾಣ ಮಾಡಲಾಗಿದೆ. ಹೆಬ್ರಿ ತಾಲೂಕು ಒಂದರಲ್ಲಿಯೇ 60ಕ್ಕೂ ಹೆಚ್ಚು ಕಾಲುಸಂಕ ಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಬ್ರಿ ತಾಲೂಕಿನಲ್ಲಿ ಇನ್ನು 30 ಕಾಲು ಸಂಕಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಲೋಕೋಪಯೋಗಿ ಇಲಾಖೆಯ ರಸ್ತೆಗಳಲ್ಲಿ ನಿರಂತರವಾಗಿ ಗುಂಡಿ ಬೀಳುತ್ತವೆ. ಆದ್ಯತೆ ಮೇಲೆ ಇವುಗಳ ದುರಸ್ಥಿ ಕಾರ್ಯಗಳನ್ನು ಆಗಿಂದಾಗ್ಗೆ ಕೈಗೊಳ್ಳಲಾಗುತ್ತಿದೆ ಎಂದ ಅವರು, ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣ ಗೊಳಿಸಿ ಜನರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಅಭಿಯಂತರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮುಖಂಡ ರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.
ಟ್ರಾಫಿಕ್ ಸಮಸ್ಯೆ: ಸಚಿವರಿಗೆ ಮನವಿ
ಇದೇ ವೇಳೆ ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ 169 ಎ ಕಾಮಗಾರಿ ನಡೆಯುತ್ತಿದ್ದು, ಶಿವಮೊಗ್ಗ-ಹೆಬ್ರಿ-ಮಣಿಪಾಲ-ಉಡುಪಿ-ಮಲ್ಪೆ ಮಾರ್ಗವಾಗಿ ವಿಪರೀತ ವಾಹನಗಳು ಸಂಚರಿಸುತ್ತಿವೆ. ಇದರಿಂದ ಹೆಬ್ರಿ ಸರ್ಕಲ್‌ನಲ್ಲಿ ದಿನನಿತ್ಯ ವಾಹನ ಚಾಲಕರಿಗೆ, ಆಂಬುಲೆನ್ಸ್ ವಾಹನಗಳಿಗೆ, ಪಾದಚಾರಿಗಳಿಗೆ ಹಾಗೂ ಶಾಲಾ- ಮಕ್ಕಳಿಗೆ ಟ್ರಾಫಿಕ್ ನಿಂದ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ಹೆಬ್ರಿ ಕೆಳಪೇಟೆಯಿಂದ ಪೊಲೀಸ್ ಕ್ವಾಟ್ರಸ್ ರಸ್ತೆಯ ವರೆಗೆ 4 ಪಥದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾಡಲು ಹೆದ್ದಾರಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವಂತೆ ಸ್ಥಳೀಯರು ಸಚಿವರಿಗೆ ಮನವಿ ಅರ್ಪಿಸಿದರು.






