ಆಗುಂಬೆ ಘಾಟಿ: ಸೆ.30ರವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ

ಉಡುಪಿ, ಜೂ.25: ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಮಲ್ಪೆ- ತೀರ್ಥಹಳ್ಳಿಯನ್ನು ಸಂಪರ್ಕಿಸುವ ರಸ್ತೆಯ ಆಗುಂಬೆ ಘಾಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಸಂಚಾರದಿಂದ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಭೂಕುಸಿತ ಆಗುವ ಸಂಭವವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ಣಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221 (ಎ)(2)(5)ರನ್ವಯ ರಾ. ಹೆದ್ದಾರಿ 169ಎ ಆಗುಂಬೆ ಘಾಟಿಯ ಮೂಲಕ ಮುಂದಿನ ಸೆಪ್ಟಂಬರ್ 30 ರವರೆಗೆ ಕೇವಲ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿ, ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ.
ಇದರಿಂದ ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ-ನಗರ-ಕುಂದಾಪುರ ಹಾಗೂ ಉಡುಪಿ ಮಾರ್ಗವಾಗಿ ಮತ್ತು ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಬರುವ ಭಾರಿ ವಾಹನಗಳು ಬಾಳೆಹೊನ್ನೂರು- ಮಾಗುಂಡಿ- ಕಳಸ-ಕುದುರೆಮುಖ-ಎಸ್.ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸಬೇಕು.
ನರಸಿಂಹರಾಜಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕೊಪ್ಪ- ಜಯಪುರ- ಬಾಳೆಹೊಳೆ- ಕಳಸ - ಕುದುರೆಮುಖ - ಎಸ್.ಕೆ ಬಾರ್ಡರ್ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.






