ಆಗುಂಬೆ ಸುರಂಗ ಮಾರ್ಗ, ಎರಡು ಲೇನ್ ರಸ್ತೆ ನಿರ್ಮಾಣಕ್ಕೆ ಯೋಜನೆ: ಪರಿಸರವಾದಿಗಳಿಂದ ವಿರೋಧ

ಉಡುಪಿ, ಫೆ.18: ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ಆಗುಂಬೆಯಲ್ಲಿ ಘಾಟ್ ರಸ್ತೆ ಮೇಲ್ದರ್ಜೆ ಯೋಜನೆ ಜೊತೆಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದ್ದು, ಈ ಬಗ್ಗೆ ಪರಿಸರ ಪ್ರೇಮಿಗಳಿಂದ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ.
ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ- 169ಎ ರಸ್ತೆಯನ್ನು (ಕಿ.ಮೀ. 30.75ರಿಂದ 51.60ರವರೆಗೆ) ಎರಡು ಲೇನ್ ರಸ್ತೆ, ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ವಿಸ್ತರಿಸುವ ಉದ್ದೇಶದಿಂದ, ಕಾರ್ಯಸಾಧ್ಯತಾ ಅಧ್ಯಯನ, ವಿವರವಾದ ಯೋಜನಾ ವರದಿ (ಡಿಪಿಆರ್), ಸಮೀಕ್ಷೆ ಹಾಗೂ ಭೂ ಯೋಜನೆ ತಯಾರಿಕೆಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೆಂಡರ್ ಆಹ್ವಾನಿಸಿದೆ.
ಇದರ ಕಾರ್ಯಸಾಧ್ಯತಾ ಅಧ್ಯಯನದೊಂದಿಗೆ 6 ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಟೆಂಡರ್‌ಗೆ ಆಹ್ವಾನ ಮಾಡಿ 2.33 ಕೋಟಿ ರೂ. ಮೀಸಲು ಇಡಲಾಗಿದೆ. ಡಿಪಿಆರ್ ವ್ಯಾಪ್ತಿಯು ನಿರ್ದಿಷ್ಟವಾಗಿ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರ ಒಳಗೊಂಡಿದ್ದು, ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಆಯ್ಕೆಯ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು, ವಿವರವಾದ ಭೂ-ತಾಂತ್ರಿಕ ತನಿಖೆಗಳಿಗೆ ಮೀಸಲಾದ ಬಜೆಟ್ ನಿಬಂಧನೆಗಳೊಂದಿಗೆ, ಅವಕಾಶ ಕಲ್ಪಿಸಲಾಗಿದೆ.
ಯೋಜನೆಗೆ ವಿರೋಧ ಯಾಕೆ?
ಈ ಯೋಜನೆ ಅನುಷ್ಠಾನಗೊಂಡರೆ ಇದರ ದುಷ್ಪರಿಣಾಮಗಳನ್ನು ಘಟ್ಟದ ಮೇಲಿನ ಮತ್ತು ಕೆಳಗಿನ ರೈತ ಸಮುದಾಯ, ಈ ಪರಿಸರದ ಸಮೃದ್ಧ ಜೀವವೈವಿಧ್ಯ ಎದುರಿಸಬೇಕಾಗುತ್ತದೆ.
ಆಗುಂಬೆ ಘಾಟಿ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ಹಾದು ಹೋಗಿದ್ದು, ಈ ಘಾಟಿ ರಸ್ತೆಯ ಎರಡೂ ಬದಿಯ ದಟ್ಟ ಅರಣ್ಯವು ಕಾಳಿಂಗ ಸರ್ಪ, ಸಿಂಹಬಾಲದ ಸಿಂಗಳಿಕ ಸೇರಿದಂತೆ ಹಲವು ಅಪರೂಪದ ಜೀವ ವೈವಿಧ್ಯದ ಆವಾಸಸ್ಥಾನವಾಗಿದೆ. ಇಲ್ಲಿ ಹುಟ್ಟುವ, ಹರಿಯುವ ಸಣ್ಣ ಪುಟ್ಟ ತೊರೆಗಳು ಘಟ್ಟದ ಕೆಳಗಿನ ನದಿಗಳನ್ನು ವರ್ಷಪೂರ್ತಿ ಜೀವಂತವಾಗಿಟ್ಟಿದೆ ಎನ್ನುತ್ತಾರೆ ಪರಿಸರ ತಜ್ಞರು.
ಆಗುಂಬೆಯ ಸೂಕ್ಷ್ಮ ಭೂರಚನೆ, ಮಣ್ಣಿನ ಗುಣಗಳನ್ನು ಗಮನಿಸಿದಾಗ ಇಲ್ಲಿ ಸುರಂಗ ಮಾರ್ಗಕ್ಕಾಗಿ ಭೂಮಿ ಕೊರೆಯುವುದರಿಂದ, ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚು. ಅಲ್ಲದೆ ಸುತ್ತಮುತ್ತಲಿನ ಸ್ಥಳ ಗಳಲ್ಲಿ ಭವಿಷ್ಯದಲ್ಲಿ ಭೂಕುಸಿತ ಆಗಬಹುದು. ಅದರ ನೇರ ದುಷ್ಪರಿಣಾಮಗಳನ್ನು ಸ್ಥಳೀಯ ಜನರೇ ಅನುಭವಿಸ ಬೇಕಾಗುತ್ತದೆ ಎಂದು ಭೂಗರ್ಭ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಆಗುಂಬೆ ಪರಿಸರವು ಕಾಳಿಂಗ ಸರ್ಪಗಳ ಮನೆ. ಈ ಕಾಳಿಂಗ ಸರ್ಪವು ಸ್ಥಳೀಯ ಜನ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವನ್ನು ಪಡೆದುಕೊಂಡಿದೆ. ಸ್ಥಳೀಯ ಜನರು ಇವತ್ತಿಗೂ ಧಾರ್ಮಿಕ ನಂಬಿಕೆಗಳ ಕಾರಣಕ್ಕೆ ದಟ್ಟಕಾಡುಗಳ ಹತ್ತಿರವೂ ಸುಳಿಯುವುದಿಲ್ಲ. ಇದರಿಂದ ಕಾಳಿಂಗ ಸರ್ಪ ಸೇರಿದಂತೆ ಸಮಸ್ತ ಜೀವವೈವಿಧ್ಯ ನೆಮ್ಮದಿಯಿಂದ ಇದೆ.
ಇಲ್ಲಿನ ಅಭಿವೃದ್ಧಿ ಕಾರ್ಯಗಳಿಂದ ಆವಾಸಸ್ಥಾನ ನಾಶವಾಗಿ ಭವಿಷ್ಯದಲ್ಲಿ ಕಾಳಿಂಗ ಸರ್ಪಗಳು ಜನವಸತಿ ಪ್ರದೇಶ ಗಳತ್ತ ಹೆಚ್ಚು ಹೆಚ್ಚು ಬರಲಿವೆ. ಆನೆ, ಕಾಡು ಕೋಣ, ಹುಲಿಗಳಂತೆ ಅವುಗಳ ವರ್ತನೆಗಳಲ್ಲಿ ಕೂಡಾ ಬದಲಾವಣೆ ಆಗಬಹುದು. ಇಲ್ಲಿಯವರೆಗೆ ಮಲೆನಾಡಿನಲ್ಲಿ ಇಲ್ಲದ ಮಾನವ ಕಾಳಿಂಗ ಸರ್ಪ ಸಂಘರ್ಷ ಹುಟ್ಟಬಹುದು. ಇದು ಕಾಳಿಂಗ ಸರ್ಪ ಮತ್ತು ಮನುಷ್ಯ ಇಬ್ಬರ ಪ್ರಾಣಕ್ಕೂ ಸಂಚಕಾರ ತರುತ್ತದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
‘ಆಗುಂಬೆ ಘಾಟಿಯಲ್ಲಿ ಈಗ ಇರುವ ರಸ್ತೆಗೆ ಟಾರ್ ಹಾಕಿ ಪ್ರತಿವರ್ಷ ನಿರ್ವಹಣೆ ಮಾಡುವುದು ಉತ್ತಮ. ಇದರಿಂದ ವನ್ಯಜೀವಿಗಳಿಗೆ ಯಾವುದೇ ಅಪಾಯ ಇಲ್ಲ. ಕಾಳಿಂಗ ಸರ್ಪ ಸೇರಿದಂತೆ ಜೀವವೈವಿಧ್ಯದ ಉಳಿವು ಮತ್ತು ಸ್ಥಳೀಯ ರೈತರ ಜೀವನೋಪಾಯದ ಉಳಿವಿಗಾಗಿ ಶಿವಮೊಗ್ಗ ಸಂಸದರು ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಿಸುವುದು ಮತ್ತು ಘಾಟಿಯಲ್ಲಿ ಎರಡು ಲೇನ್ ರಸ್ತೆ ಮಾಡುವ ಯೋಚನೆಯನ್ನು ಕೈಬಿಡಬೇಕು. ಸೋಮೇಶ್ವರ ವನ್ಯಜೀವಿ ಧಾಮದಲ್ಲಿ ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಡಿಪಿಆರ್ ನಡೆಸಲು ವನ್ಯಜೀವಿ ವಿಭಾಗ ಬಿಡಬಾರದು’
-ನಾಗರಾಜ ಕೂವೆ, ಪರಿಸರ ಹೋರಾಟಗಾರ
‘ದಶಕಗಳಿಂದ ಜನರು ಎದುರಿಸುತ್ತಿದ್ದ ಅಪಾಯಕರ ಪ್ರಯಾಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಇದು ಮೊದಲ ನಿರ್ಣಾಯಕ ಹೆಜ್ಜೆ. ಈ ಯೋಜನೆ ಮಲೆನಾಡು-ಕರಾವಳಿ ಜಿಲ್ಲೆಗಳ ಸಂಪರ್ಕ ಸುಧಾರಿಸಿ, ಸುರಕ್ಷತೆ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಸ್ಥಳೀಯ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ. ಮುಂದಿನ ಹಂತಗಳಲ್ಲಿ ಯೋಜನೆ ಸುಗಮವಾಗಿ ಸಾಗಲು ಕೇಂದ್ರದೊಂದಿಗೆ ನಿರಂತರ ಸಂಯೋಜನೆ ಇರುವುದು, ಭೂಸ್ವಾಧೀನ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡಬೇಕು’
-ಬಿ.ವೈ.ರಾಘವೇಂದ್ರ, ಸಂಸದರು






