ಉಡುಪಿಯಲ್ಲಿ ಆರ್ಟಿಫಿಶಲ್ ಇಂಟಲಿಜೆನ್ಸ್ ಸಂಚಾರ ವ್ಯವಸ್ಥೆ ಅನುಷ್ಠಾನ: ಎಸ್ಪಿ ಹರಿರಾಂ ಶಂಕರ್

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್
ಉಡುಪಿ: ಉಡುಪಿ ನಗರ ಹಾಗೂ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಆರ್ಟಿಫಿಶಲ್ ಇಂಟೆಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ ಮೂಲಕ ದಂಡ ವಿಧಿಸುವ ಹಾಗೂ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ನಗರದಲ್ಲಿ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಮೂರು ಪ್ರಾಜೆಕ್ಟ್ಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೆಜ್ಮೆಂಟ್ ಸಿಸ್ಟಮ್ ನಡಿ ಏಳು ಜಂಕ್ಷನ್ಗಳಲ್ಲಿ 14 ಕ್ಯಾಮೆರಾಗಳನ್ನು ಆಳವಡಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ನಗರಸಭೆಯ 50ಲಕ್ಷ ರೂ. ಅನುದಾನದಲ್ಲಿ ನಾಲ್ಕು ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.
ಈ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಲಾಗುವುದು. ದಂಡದ ನೋಟೀಸ್ ನೇರವಾಗಿ ಅವರ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಆರಂಭಿಸಲಾಗುವುದು. ಹೀಗೆ ಎಲ್ಲ ವ್ಯವಸ್ಥೆಯನ್ನು ಅಟೋಮೆಟಿಕ್ ಮಾಡಲಾಗುವುದು. ಇನ್ನು ಟ್ರಾಫಿಕ್ ಪೊಲೀಸರು ನಿಂತು ದಂಡ ವಿಧಿಸುವ ಕ್ರಮವನ್ನು ಕ್ರಮೇಣ ಕಡಿಮೆ ಮಾಡಲಾಗುವುದು ಎಂದು ಅವರು ಹೇಳಿದರು.
ಇದೇ ಯೋಜನೆಗೆ ಉಡುಪಿ ನಗರಸಭೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಆ ಹಣದಲ್ಲಿ ನಗರಸಭೆ ವ್ಯಾಪ್ತಿಯ 3-4 ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಇದು ಕೂಡ ಆರ್ಟಿಫಿಶಲ್ ಇಂಟೆಲಿಜೆನ್ಸ್ ಸಿಸ್ಟಮ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ನಗರ ಮತ್ತು ಜಿಲ್ಲಾ ಗಡಿ ಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರನ್ನು ಕ್ಯಾಮೆರಾ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಲು ಅನುಕೂಲವಾಗುತ್ತದೆ ಎಂದು ಎಸ್ಪಿ ತಿಳಿಸಿದರು.
ಸ್ಪೀಡ್ ರ್ಯಾಡರ್ ಗನ್ ಅಳವಡಿಕೆ
ಸರಕಾರದಿಂದ ಉಡುಪಿ ಜಿಲ್ಲೆಯಲ್ಲಿ ಸ್ಪೀಡ್ ರ್ಯಾಡರ್ ಗನ್ ಅಳವಡಿಸಲು ಅನುಮೋದನೆ ದೊರೆತಿದ್ದು, ಇವುಗಳನ್ನು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 6 ಸ್ಥಳಗಳಲ್ಲಿ ಅಳವಡಿಸಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಈ ಮೂಲಕ ಓವರ್ ಸ್ಪೀಡ್ನಲ್ಲಿ ಸಂಚರಿಸುವ ವಾಹನಗಳನ್ನು ಪತ್ತೆ ಹಚ್ಚಲಾಗುವುದು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಬಹುದಾಗಿದೆ. ಉಡುಪಿ ಚೇಂಬರ್ ಆಫ್ ಕಾಮರ್ಸ್ ಜೊತೆ ಆರಂಭಿಸಿರುವ ಸೇನಾ ದೃಷ್ಠಿ ಯೋಜನೆಯಲ್ಲಿ 200 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಿಸಲಾಗಿದ್ದು, ಅದರ ಪೈಕಿ 25 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.







