ಎಕೆಎಂಎಸ್ ಸೈಫ್ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ; ಹಳೆ ಧ್ವೇಷವೇ ಕೊಲೆಗೆ ಕಾರಣ

ಉಡುಪಿ, ಸೆ.28: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಸಾಲ್ಮರದ ಮನೆಯಲ್ಲಿ ಶನಿವಾರ ನಡೆದ ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಅತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮಹಮದ್ ಫೈಸಲ್ ಖಾನ್(27), ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮೊಹಮದ್ ಶರೀಫ್(37), ಸುರತ್ಕಲ್ ಕೃಷಾಪುರದ ಏಳನೇ ಬ್ಲಾಕ್ ನಿವಾಸಿ ಅಬ್ದುಲ್ ಶುಕೂರು ಯಾನೆ ಅದ್ದು (43) ಬಂಧಿತ ಆರೋಪಿಗಳು. ಇದರಲ್ಲಿ ಶರೀಫ್ ಹಾಗೂ ಅದ್ದು ಎಕೆಎಂಎಸ್ ಬಸ್‌ನಲ್ಲಿ ಚಾಲಕರಾಗಿ ದುಡಿಯುತ್ತಿದ್ದರೆ, ಫೈಸಲ್ ಖಾನ್, ಸೈಫ್‌ನ ಆತ್ಮೀಯನಾಗಿದ್ದನು.
ಈ ಕಾರ್ಯಾಚರಣೆಯನ್ನು ಉಡುಪಿ ಡಿವೈಎಸ್ಪಿ ಡಿ.ಟಿ.ಪ್ರಭು ಮಾರ್ಗ ದರ್ಶನದಲ್ಲಿ ತನಿಖಾಧಿಕಾರಿ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಮಲ್ಪೆ ಎಸ್ಸೈ ಅನಿಲ್ ಕುಮಾರ್ ಡಿ. ಹಾಗೂ ಸಿಬ್ಬಂದಿಯವರ ವಿಶೇಷ ತಂಡ ನಡೆಸಿದೆ.
ರಾಡ್‌ನಿಂದ ತಲೆಗೆ ಬಡಿದರು: ಸೈಫುದ್ದೀನ್ ಎರಡು ವರ್ಷಗಳ ಹಿಂದೆ ಮಣಿಪಾಲದಲ್ಲಿ ಹೊಸ ಮನೆ ನಿರ್ಮಿಸಿ, ಮಲ್ಪೆ ಕೊಡವೂರು ಸಾಲ್ಮರದಿಂದ ಅಲ್ಲಿಗೆ ಕುಟುಂಬ ಸಮೇತ ಶಿಫ್ಟ್ ಆಗಿದ್ದನು.
ಇದೀಗ ಮತ್ತೆ ವಾಪಾಸ್ಸು ಕೊಡವೂರಿನ ಮನೆಗೆ ಶಿಫ್ಟ್ ಆಗಲು ಸೈಫ್ ಯೋಜಿಸಿದ್ದ ಎನ್ನಲಾಗಿದೆ. ಅದಕ್ಕಾಗಿ ಈ ಮನೆಗೆ ಬೇಕಾದ ಇಲೆಕ್ಟ್ರಿಕಲ್ ಉಪಕರಣಗಳನ್ನು ಖರೀದಿಸುವ ಬಗ್ಗೆ ಸೈಫ್, ಶುಕೂರು ಮತ್ತು ಫೈಸಲ್‌ನನ್ನು ಕೊಡವೂರಿನ ಮನೆಗೆ ಕರೆದುಕೊಂಡು ಹೋಗಿದ್ದನು. ದಾರಿ ಮಧ್ಯೆ ಶುಕೂರು ಕೂಡ ಸೇರಿಕೊಂಡಿದ್ದನು.
ಮನೆಯ ಬೀಗ ತೆಗೆದು ಒಳಗೆ ಪ್ರವೇಶಿಸುತ್ತಿದ್ದಂತೆಯೇ ಮೂವರು ಆರೋಪಿಗಳು, ಹಿಂದಿನಿಂದ ಸೈಫ್‌ನ ತಲೆಗೆ ಕಬ್ಬಿಣದ ರಾಡ್‌ನಿಂದ ಬಡಿದರೆನ್ನಲಾಗಿದೆ. ಇದರಿಂದ ಅರೆಪ್ರಜ್ಞ ಸ್ಥಿತಿಯಲ್ಲಿದ್ದ ಸೈಫ್‌ಗೆ ಅವರದ್ದೇ ಮನೆಯಲ್ಲಿದ್ದ ತಲವಾರಿನಿಂದ ಕಡಿದು ಕೊಲೆ ಮಾಡಿ ಪರಾರಿಯಾದರು ಎಂಬುದು ಪೊಲೀಸ್ ಮೂಲಗಳು ತಿಳಿಸಿವೆ.
ಮುಂದುವರೆದ ತನಿಖೆ: ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡ ಬಳಿಕ ಇನ್ನು ಹೆಚ್ಟಿನ ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಕೃತ್ಯಕ್ಕೆ ಬಳಸಿದ ಮಾರಕಾಯುಧಗಳನ್ನು ವಶಪಡಿಸಿಕೊಳ್ಳಬೇಕಾಗಿದೆ. ಅದೇ ರೀತಿ ಈ ಕೊಲೆಯ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದು ಕೂಡ ತನಿಖೆಯಿಂದ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಶನಿವಾರ ಸಂಜೆ ಮಂಗಳೂರು ಪಶ್ಚಿಮ ವಲಯದ ಡಿಐಜಿ ಅಮಿತ್ ಸಿಂಗ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೆ ಧ್ವೇಷವೇ ಕೊಲೆಗೆ ಕಾರಣ
ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಂಪಳ್ಳಿಯಲ್ಲಿ 2020ರ ಫೆ.10ರಂದು ನಡೆದ ನ್ಯೂಮುಂಬಯಿಯ ಹೊಟೇಲ್ ಮಾಲಕ ವಶಿಷ್ಠ ಯಾದವ್ ಕೊಲೆ ಪ್ರಕರಣದಲ್ಲಿ ಸೈಫ್ ಜೊತೆ ಶರೀಫ್ ಮತ್ತು ಶುಕೂರು ಕೂಡ ಭಾಗಿಯಾಗಿ ಜೈಲು ಸೇರಿದ್ದರು.
ಈ ಪ್ರಕರಣದಲ್ಲಿ ಶುಕೂರು 4 ವರ್ಷ 8 ತಿಂಗಳ ಕಾಲ ಜೈಲಿನಲ್ಲಿದ್ದನು. ಈ ಸಂದರ್ಭದಲ್ಲಿ ಸೈಫ್, ಶುಕೂರಿಗೆ ಯಾವ ರೀತಿಯಲ್ಲೂ ಸಹಾಯ ಮಾಡಿಲ್ಲ ಎಂಬ ಧ್ವೇಷವೂ ಈ ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ಸೈಫ್ ಜೊತೆ ಕಳೆದ 9-10ವರ್ಷಗಳಿಂದ ಓಡನಾಟದಲ್ಲಿದ್ದು, ಈ ಮಧ್ಯೆ ಹಣಕಾಸಿನ ವಿಚಾರದಲ್ಲೂ ಈ ಮೂವರಿಗೆ ಆತನ ಮೇಲೆ ಧ್ವೇಷ ಹುಟ್ಟಿಕೊಂಡಿತ್ತೆನ್ನಲಾಗಿದೆ. ಈ ಎಲ್ಲ ಕಾರಣಕ್ಕೆ ಇವರು ಮೂವರು ಕೊಲೆಗೆ ಯೋಜನೆ ಹಾಕಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬಂಧಿತ ಆರೋಪಿಗಳನ್ನು ರಜೆಯ ಹಿನ್ನೆಲೆಯಲ್ಲಿ ತನಿಖಾಧಿಕಾರಿ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಇಂದು ಸಂಜೆ ವೇಳೆ ನ್ಯಾಯಾಧೀಶರ ನಿವಾಸ ಕಚೇರಿಗೆ ಹಾಜರುಪಡಿಸಲಾಯಿತು.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಾಧೀಶರು, ನಾಳೆ ಕೋರ್ಟ್‌ಗೆ ಹಾಜರುಪಡಿಸುವಂತೆ ಆದೇಶ ನೀಡಿದ್ದಾರೆ. ನಾಳೆ ಪೊಲೀಸರು ಹೆಚ್ಚಿನ ತನಿಖೆಗಾಗಿ ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.







