ಅಲೆವೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ

ಉಡುಪಿ, ಆ.16: ಅಲೆವೂರು ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಯತೀಶ್ ಕುಮಾರ್ ಅಲೆವೂರು ಹಾಗೂ ಉಪಾಧ್ಯಕ್ಷರಾಗಿ ಅಮೃತಾ ಪೂಜಾರಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಸದಸ್ಯರು ಆ.16ರಂದು ಅಲೆವೂರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾ ಮುಖಾಂತರ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ ಸೊರಕೆ, ಹರೀಶ್ ಕಿಣಿ, ಮಾಜಿ ಅಧ್ಯಕ್ಷರಾದ ಪುಷ್ಪಾ ಅಂಚನ್, ಮಾಜಿ ಉಪಾಧ್ಯಕ್ಷ ಸುಧಾಕರ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಪುತ್ರನ್, ಸಂತೋಷ್ ಕುಲಾಲ್ ಹಾಗೂ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಮತ್ತಿರರು ಉಪಸ್ಥಿತರಿದ್ದರು.
ಕಾಂಗ್ರೆಸ್‌ಗೆ ಲಾಭ: ಅಲೆವೂರು ಪಂಚಾಯತ್‌ನಲ್ಲಿ ಕಾಂಗ್ರೆಸ್‌ನ 15 ಹಾಗೂ ಬಿಜೆಪಿಯ 14 ಸದಸ್ಯರಿದ್ದಾರೆ. ಕಳೆದ ಬಾರಿ ಯಂತೆ ಈ ಸಲವೂ ಅಧಿಕಾರ ಕಾಂಗ್ರೆಸ್‌ನ ಕೈವಶವಾಗಿದೆ. ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಈ ಬಾರಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಿದ್ದರಿಂದ ಯತೀಶ್‌ಕುಮಾರ್ 16 ಮತಗಳನ್ನು ಪಡೆಯುವಂತಾಯಿತು.
ಸಾಮಾನ್ಯರಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಲೆವೂರು 5ನೇ ವಾರ್ಡಿನ ಯತೀಶ್ ಕುಮಾರ್ 16 ಮತ ಪಡೆದರೆ, ಬಿಜೆಪಿ ಬೆಂಬಲಿತ ಸದಸ್ಯ ಕೊರಂಗ್ರಪಾಡಿಯ ಶಂಕರ್ ಪಾಲನ್ 13 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಮೃತ ಪೂಜಾರಿ 15 ಮತ ಪಡೆದರೆ, ಬಿಜೆಪಿ ಬೆಂಬಲಿತ ರೇಣುಕಾ ಶೆಟ್ಟಿ 14 ಮತ ಪಡೆದರು.







