ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಔಷಧಿ ವಿತರಣೆ: ಆರೋಪ

ಬ್ರಹ್ಮಾವರ, ನ.20: ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ತೆರಳಿದ್ದ ಮಹಿಳಾ ರೋಗಿಯೊಬ್ಬರಿಗೆ ಅವಧಿ ಮುಗಿಯುವ ಹಂತದಲ್ಲಿದ್ದ ಡಯಾಬಿಟಿಸ್ ಮಾತ್ರೆಗಳನ್ನು ವಿತರಿಸಿರುವ ಕುರಿತ ಗಂಭೀರ ಆರೋಪಗಳು ಕೇಳಿಬಂದಿವೆ.
ಬ್ರಹ್ಮಾವರ ಪರಿಸರದ 40-45ವರ್ಷ ಪ್ರಾಯದ ಮಹಿಳೆಯೊಬ್ಬರು ಅ.6ರಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಯಬಿಟಿಸ್ ಸಂಬಂಧ ಆರೋಗ್ಯ ತಪಾಸಣೆಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ವೈದ್ಯರು ತಪಾಸಣೆ ನಡೆಸಿ, ಅಗತ್ಯ ಔಷಧಗಳನ್ನು ಚೀಟಿಯಲ್ಲಿ ಬರೆದು ಕೊಟ್ಟಿದ್ದರು. ಅದರಂತೆ ಆಸ್ಪತ್ರೆಯ ಔಷಧಾಲಯದಿಂದ ಮೆಟ್ಫಾರ್ಮಿನ್ ಹೈಡ್ರೋಕ್ಲೋರೈಡ್ ಸಸ್ಟೇನ್ಡ್ ರಿಲೀಸ್ ಎಂಬ ಡಯಾಬಿಟಿಸ್ ಮಾತ್ರೆಗಳನ್ನು ಪಡೆದಿದ್ದರು.
ವೈದ್ಯರ ಸೂಚನೆಯಂತೆ 30 ದಿನಗಳಿಗೆ ಒಟ್ಟು 60 ಮಾತ್ರೆಗಳನ್ನು ನೀಡಲಾಗಿತ್ತು. ಆದರೆ ವಿತರಿಸಲಾದ ಮಾತ್ರೆಗಳ ಸ್ಟ್ರೀಪ್‌ನಲ್ಲಿ ಮುಕ್ತಾಯ ದಿನಾಂಕವನ್ನು ನವೆಂಬರ್ 2024- ಅಕ್ಟೋಬರ್ 2026 ಎಂಬುದಾಗಿ ನಮೂದಿಸಲಾಗಿತ್ತು.
30 ದಿನಗಳ ಚಿಕಿತ್ಸೆಗೆ ಅಗತ್ಯವಿರುವ ಮಾತ್ರೆಗಳನ್ನು ವಿತರಿಸುವಾಗ ಅವುಗಳ ಬಳಕೆಯ ಅವಧಿಯನ್ನು ಪರಿಶೀಲಿಸದೆ ನೀಡಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಅಕ್ಟೋಬರ್ ತಿಂಗಳಲ್ಲಿಯೇ ಅವಧಿ ಮುಕ್ತಾಯ ಆಗುವ ಮಾತ್ರೆಗಳನ್ನು ಅ.6ರಂದು 30 ದಿನಗಳಿಗೆ ಬೇಕಾಗುವಷ್ಟು ನೀಡಿದ್ದು, ಇದು ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ. ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
‘ಔಷಧಾಲಯದಲ್ಲಿ ಔಷಧ ವಿತರಿಸುವ ಮೊದಲು ಅವುಗಳ ಉತ್ಪಾದನಾ ದಿನಾಂಕ ಮತ್ತು ಅವಧಿ ಮುಕ್ತಾಯದ ದಿನಾಂಕವನ್ನು ಪರಿಶೀಲಿಸುವ ಜವಾಬ್ದಾರಿ ಸಿಬ್ಬಂದಿಯದ್ದಾಗಿದೆ. ಅದರಲ್ಲೂ ದೀರ್ಘಾವಧಿಯ ಚಿಕಿತ್ಸೆಗೆ ನೀಡುವ ಔಷಧಗಳ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಮಧುಮೇಹ ನಿಯಂತ್ರಣಕ್ಕೆ ಬಳಸುವ ಮೆಟ್ಫಾರ್ಮಿನ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ. ಇಂತಹ ಔಷಧಗಳ ಅವಧಿ ಮುಕ್ತಾಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವುದು ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ರೋಗಿಯ ಮನೆಯವರು ದೂರಿದ್ದಾರೆ.
ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ, ಔಷಧ ವಿತರಣೆಯಲ್ಲಿ ಲೋಪವಾ ಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರಿ ಆರೋಗ್ಯ ಕೇಂದ್ರಗಳ ಔಷಧಾಲಯಗಳಲ್ಲಿ ಔಷಧಗಳ ಅವಧಿ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ವಾರ್ತಾಭಾರತಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಅವರನ್ನು ಸಂಪರ್ಕಿಸಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.






