ಭೂಗತಪಾತಕಿ ಹೇಮಂತ್ ಪೂಜಾರಿಗೆ ಉದ್ದಿಮೆದಾರರ ಮೊಬೈಲ್ ಸಂಖ್ಯೆ ನೀಡಿದ ಆರೋಪ: ಓರ್ವನ ಬಂಧನ

ಹರೀಶ್ ಪೂಜಾರಿ
ಉಡುಪಿ, ನ.4: ಹಣ ನೀಡುವಂತೆ ಬೆದರಿಕೆ ಕರೆ ಮಾಡಲು ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಉದ್ದಿಮೆದಾರರ ಮೊಬೈಲ್ ಸಂಖ್ಯೆ ನೀಡಿರುವ ಆರೋಪದಲ್ಲಿ ಓರ್ವ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಸಾಂತೂರು ಗ್ರಾಮದ ಹರೀಶ್ ಪೂಜಾರಿ (45) ಬಂಧಿತ ಆರೋಪಿ. ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಕೊಲೆ ಪ್ರಕರಣದ ಬಳಿಕ ಭೂಗತ ಪಾತಕಿ ಹೇಮಂತ್ ಪೂಜಾರಿ ಪಡುಬಿದ್ರೆ, ಮಣಿಪಾಲ, ಕಾಪು ಮತ್ತು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ದಿಮೆದಾರರನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಕರೆ ಮಾಡಿ ಕೊಟ್ಯಾಂತರ ರೂ.ಗಳಿಗೆ ಬೇಡಿಕೆ ಇಡುತ್ತಿದ್ದು, ಹಣ ಕೊಡದೇ ಇದ್ದಲ್ಲಿ ಡೇವಿಡ್ ಡಿಸೋಜ ರೀತಿಯಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಈ ಸಂಬಂಧ ಪಡುಬಿದ್ರೆ, ಮಣಿಪಾಲ, ಕಾಪು ಮತ್ತು ಶಿರ್ವ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ.
ಶಿರ್ವ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು, ಹೇಮಂತ ಪೂಜಾರಿಗೆ ಉದ್ದಿಮೆದಾರರ ಮೊಬೈಲ್ ಸಂಖ್ಯೆಗಳನ್ನು ನೀಡಿ ಕೃತ್ಯದಲ್ಲಿ ಭಾಗಿಯಾದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಹೇಮಂತ್ ಪೂಜಾರಿಗೆ ಉದ್ದಿಮೆದಾರರ ಮೊಬೈಲ್ ಸಂಖ್ಯೆ ನೀಡಿ ಕೃತ್ಯಕ್ಕೆ ಸಹಕರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದರಂತೆ ಆರೋಪಿಯನ್ನು ನ.2ರಂದು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿ ಹರೀಶ್ ಪೂಜಾರಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






