ಉಡುಪಿ ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆ ಆರೋಪ: ಕ್ರಮಕ್ಕೆ ಎಸ್ಪಿಗೆ ಮನವಿ

ಉಡುಪಿ, ಜ.20: ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ಆವರಣ ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಯಾಗುತ್ತಿದ್ದು, ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಿರಬೀಡುವಿನಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ರಾತ್ರಿಯ ಹೊತ್ತು ಕುಡುಕರು ಹಾಗೂ ತೃತೀಯ ಲಿಂಗಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ಸುತ್ತಲಿನ ಸ್ಥಳ ಕತ್ತಲಾಗಿರುವುದರಿಂದ ಎಲ್ಲ ರೀತಿಯ ಕೆಟ್ಟ ಕೆಲಸಗಳು ನಡೆಯುತ್ತಿವೆ. ವಿದ್ಯುತ್ ಲೈಟ್ ಹಾಕಿದರೂ ಕೂಡ ಅದನ್ನು ಒಡೆದು ಹಾಕಿ ರಾಜಾರೋಷವಾಗಿ ಅವ್ಯವಹಾರ ನಡೆಸುತ್ತಿದ್ದಾರೆ. ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸ ಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಸೇರಿಗಾರ್ತಿ, ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಯಪ್ರಕಾಶ್ ಶೆಟ್ಟಿ, ನಾಗರಾಜ್, ಗಣೇಶ ರಮೇಶ, ಸವಿತಾ, ಆಶಾ ಮೊದಲಾದವರು ಉಪಸ್ಥಿತರಿದ್ದರು.





