ಬಾಳೆಕುದ್ರು ಮಠದ ವಿಗ್ರಹ ಮಾರಾಟ ಯತ್ನ ಆರೋಪ: ಸ್ವಾಮೀಜಿ ಸಹಿತ ಐವರ ವಿರುದ್ಧ ಪ್ರಕರಣ ದಾಖಲು

ಉಡುಪಿ, ನ.5: ಬಾಳೆಕುದ್ರು ಮಠದ ಶ್ರೀವಾಸುದೇವ ಸದಾಶಿವಶ್ರಮ ಸ್ವಾಮೀಜಿ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ವಿಗ್ರಹ ಕಳವು ಪ್ರಕರಣ ದಾಖಲಾಗುತ್ತಿದ್ದಂತೆ ಬ್ರಹ್ಮಾವರ ತಾಲೂಕಿನಲ್ಲಿರುವ ಬಾಳೆಕುದ್ರು ಮಠಕ್ಕೆ ಬೀಗ ಹಾಕಿ ಸ್ವಾಮೀಜಿ ಸೇರಿದಂತೆ ಸಿಬ್ಬಂದಿ ನಾಪತ್ತೆಯಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಮಠದ ಭಕ್ತರು ಸ್ಥಳದಲ್ಲಿ ಜಮಾಯಿಸಿದ್ದು, ಸ್ವಾಮೀಜಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ರಾತ್ರಿಯಿಂದ ಮಠಕ್ಕೆ ಬೀಗ ಹಾಕಲಾಗಿದ್ದು, ಸ್ವಾಮೀಜಿ ಸಹಿತ ಎಲ್ಲರೂ ನಾಪತ್ತೆಯಾಗಿದ್ದಾರೆ. ಇದರಿಂದ ದೇವರಿಗೆ ಪ್ರತಿದಿನ ಮೂರು ಹೊತ್ತು ನಡೆಯುತ್ತಿದ್ದ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿವೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾಮೀಜಿ ಪರಾರಿ ಆರೋಪ: ಕಳೆದ ಎರಡು ವರ್ಷಗಳಿಂದ ಸನ್ಯಾಸಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮಠದಲ್ಲಿ ನೆಲೆಸಿದ್ದು, ಅವರನ್ನು ಸ್ಥಳೀಯ ಭಕ್ತರು ಸ್ವಾಮೀಜಿಯಾಗಿ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಸ್ವಾಮೀಜಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ಆಡಿಯೋ ಸಂಭಾಷಣೆಗಳು ವೈರಲ್ ಆಗಿದ್ದು, ಅವು ಎಐ ಮೂಲಕ ಸೃಷ್ಟಿಸಿದ ನಕಲಿ ಆಡಿಯೋಗಳೆಂದು ಸ್ವಾಮೀಜಿ ಕಡೆಯವರು ಹೇಳಿಕೊಂಡಿದ್ದರು. ಗ್ರಾಮಸ್ಥರು ಪ್ರತಿಭಟನೆ ಮಾಡಿದರೂ ಅವರು ಮಠವನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಈಗ ಅವರ ಒಂದೊಂದೆ ಹಗರಣಗಳು ಹೊರ ಬರುತ್ತಿವೆ ಎಂದು ಮಠದ ಶಿಷ್ಯ ಪ್ರೀತಮ್ ಅಡಿಗ ಆರೋಪಿಸಿದರು.
ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಕಳೆದ ರಾತ್ರಿಯಿಂದ ಸ್ವಾಮೀಜಿ, ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಮಠವನ್ನು ತೊರೆದಿದ್ದು, ಮಠಕ್ಕೆ ಬೀಗ ಹಾಕಲಾಗಿದೆ. ಇದರಿಂದ ದೇವರಿಗೆ ನಿತ್ಯ ಪೂಜೆ ನಡೆಯುತ್ತಿಲ್ಲ. ಬೆಳಗ್ಗೆ ಬೇರೆ ಮಠದಿಂದ ಬಂದವರು ಎಂದು ಹೇಳಲಾಗುತ್ತಿರುವ ಕೆಲವರು ಪೂಜೆ ಸಲ್ಲಿಸಿದ್ದರೂ, ಮಠದ ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ ನಡೆದಿಲ್ಲ. ಸ್ಥಳೀಯ ಭಕ್ತರಿಗೆ ಮಠ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಮಠದ ಹಿತರಕ್ಷಣಾ ಸಮಿತಿ ಸದಸ್ಯ ಸುರೇಶ್ ಅಡಿಗ ಅಸಮಾಧಾನ ವ್ಯಕ್ತಪಡಿಸಿದರು.
ವಿಗ್ರಹಗಳ ಪ್ರಸ್ತುತ ಸ್ಥಿತಿ, ಮಠದಲ್ಲಿರುವ ಮೂಲ ವಿಗ್ರಹಗಳ ಸಂಖ್ಯೆ ಹಾಗೂ ಅವುಗಳ ಮಾರಾಟದ ಹಿಂದಿನ ಉದ್ದೇಶದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಂತಾರಾಷ್ಟ್ರೀಯ ಪುರಾತನ ವಸ್ತುಗಳ ಕಳ್ಳಸಾಗಣೆ ಜಾಲ ದೊಂದಿಗೆ ಪ್ರಕರಣಕ್ಕೆ ಸಂಬಂಧವಿದೆಯೇ ಎಂಬುದನ್ನು ಕೂಡ ಪರಿಶೀಲಿಸಬೇಕು ಎಂದು ಪ್ರೀತಮ್ ಅಡಿಗ ಆಗ್ರಹಿಸಿದರು.
ದೂರಿನಲ್ಲಿ ಏನಿದೆ?: ಮಠದ ಶಿಷ್ಯ ಜಗದೀಶ್ ಐತಾಳ್ ಬಸವೇಶ್ವರ ನಗರ ಠಾಣೆಗೆ ನೀಡಿದ ದೂರಿನಂತೆ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್‌ಮಧ್ಯಸ್ಥ ಹಾಗೂ ಅಲ್ಲಿನ ಸಿಬ್ಬಂದಿಗಳಾದ ಜಯಲಕ್ಷ್ಮೀ ಹಾಗೂ ಶ್ರೇಯಸ್ ಮತ್ತು ಅಂಗಡಿ ಮಾಲಕ ನಾಗೇಂದ್ರ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಳೆಕುದ್ರು ಮಠದಲ್ಲಿ 2024ರಿಂದ ವಾಸುದೇವ ಸದಾಶಿವಾಶ್ರಮ ಎಂಬ ವ್ಯಕ್ತಿ ಅನಧಿಕೃತವಾಗಿ ನೆಲೆಸಿದ್ದು, ಮಠದಲ್ಲಿ ನಿತ್ಯ ಪೂಜೆಗೊಳಪಟ್ಟಿದ್ದ ಕೆಲವು ಪ್ರಮುಖ ದೇವರ ಪುರಾತನ ವಿಗ್ರಹಗಳಾದ 6-7ನೇ ಶತಮಾನಕ್ಕೆ ಸೇರಿದ್ದ ವಲ್ಲಭ ಗಣಪತಿ ವಿಗ್ರಹ, ಶಕ್ತಿಗಣಪತಿ ವಿಗ್ರಹ, ವಿಜಯನಗರ ಕಾಲದ ಪ್ರತಿಮೆಯಾದ ಲಕ್ಷ್ಮೀನರಸಿಂಹ ವಿಗ್ರಹ ಮತ್ತು 12ನೇ ಶತಮಾನಕ್ಕೆ ಸೇರಿದ್ದ ಮಹಿಷಮರ್ದಿನಿ ದೇವಿ ವಿಗ್ರಹಗಳನ್ನು ವಾಸುದೇವ ಸದಾಶಿವಾಶ್ರಮ, ಮಠದ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಗಳ ಸಂಚಿನಿಂದ ಕಳ್ಳತನ ಮಾಡಿ ಬೆಂಗಳೂರಿನ ಬಸವೇಶ್ವರನಗರ ದಲ್ಲಿರುವ ಐಡಲ್ಸ್ ಎಂಬ ಅಂಗಡಿಯ ಮಾಲಕ ನಾಗೇಂದ್ರ ಪ್ರಸಾದ್‌ಗೆ 2025ರಲ್ಲಿ ಮಾರಾಟ ಮಾಡಿರುವುದಾಗಿ ದೂರಲಾಗಿದೆ.
ಅಲ್ಲದೆ ಆರೋಪಿಗಳು ಮಾರಾಟ ಮಾಡಿದ ವಿಗ್ರಹಗಳ ಪ್ರತಿರೂಪಗಳನ್ನು ಅದೇ ಅಂಗಡಿಯವರಿಂದ ಮಾಡಿಸಿ, ಮರದಲ್ಲಿ ಪೂಜೆಗಿಟ್ಟು ಭಕ್ತರಿಗೆ ವಂಚಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಆರೋಪಿಗಳು ಮಾಡಿರುವ ವಿಗ್ರಹಗಳ ಕಳ್ಳತನ, ಮಾರಾಟ ಹಾಗೂ ಕಳ್ಳತನ ಮಾಡಿದ ವಿಗ್ರಹಗಳನ್ನು ಅಕ್ರಮ ಲಾಭ ಪಡೆಯಲು ಸ್ವೀಕರಿಸಿ ರುವ ಬಗ್ಗೆ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.






