ಬರಪೀಡಿತ ತಾಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಅವಕಾಶ
ಉಡುಪಿ, ಅ.3: ಜಿಲ್ಲೆಯ ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕುಗಳನ್ನು ಸರಕಾರದ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದ್ದು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಆಧಿನಿಯಮದ ವಿಧಿ 3(4)ರಡಿ ನೀಡಿದ ಅಧಿಕಾರದಂತೆ ಬರಪೀಡಿತ ತಾಲೂಕುಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಹೆಚ್ಚುವರಿಯಾಗಿ 50 ದಿನಗಳ ಅಂದರೆ ಒಟ್ಟು 150 ದಿನಗಳ ಉದ್ಯೋಗ ಒದಗಿಸಲು ಅವಕಾಶವಿದೆ.
ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬಹುದಾಗಿದೆ. ಯೋಜನೆ ಯಡಿ ಅನುಮತಿಸಿದ ಸಾರ್ವಜನಿಕ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶವಿದೆ. ವೈಯಕ್ತಿಕ ಕಾಮಗಾರಿಗಳಲ್ಲಿ ಮುಖ್ಯವಾಗಿ ದನದ ಕೊಟ್ಟಿಗೆ, ಕುರಿ, ಕೋಳಿ, ಹಂದಿ ಶೆಡ್‌ಗಳು, ಎರೆಹುಳು ತೊಟ್ಟಿ, ವಸತಿ ಯೋಜನೆಯಡಿ ಮಂಜೂರಾದ ಮನೆಗಳ ನಿರ್ಮಾಣ, ಮೀನು ಒಣಗಿಸುವ ಕಣ, ಕೃಷಿ ಹೊಂಡ, ಕೃಷಿ ಬಾವಿ ಮತ್ತು ಕೃಷಿ ಜಮೀನಿಗೆ ಸಂಬಂಧಿಸಿದ ಇತರೆ ಕಾಮಗಾರಿಗಳು, ಇಂಗು ಗುಂಡಿ ನಿರ್ಮಾಣ ಹಾಗೂ ತೋಟಗಾರಿಕಾ ಕಾಮಗಾರಿಗಳಾದ ಅಡಿಕೆ ತೋಟ ನಿರ್ಮಾಣ, ಪೌಷ್ಟಿಕ ತೋಟ ಮುಂತಾದ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶವಿದೆ.
ಸಾರ್ವಜನಿಕರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಯೋಜನೆಯಡಿ ಕೆಲಸ ಪಡೆಯಲು ಸಮೀಪದ ಗ್ರಾಮ ಪಂಚಾಯತಿ ಕಚೇರಿಯನ್ನು ಸಂಪರ್ಕಿಸಿ, ರೈತರು ಹಾಗೂ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದು ಕೊಳ್ಳುವಂತೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





