ಆಲೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಕುಂದಾಪುರ, ಜ.15: ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ಆಲೂರು ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಲೂರಿನ ಶ್ರೀಮೂಕಾಂಬಿಕಾ ಸಭಾಭವನದಲ್ಲಿ ನಡೆಯಿತು.
ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್ ಮಾತನಾಡಿ, ಯಾವುದೇ ಉದ್ಯಮ, ವಹಿವಾಟಿನಲ್ಲಿ ಕಾನೂನು ಪಾಲನೆ ಅತ್ಯಗತ್ಯ. ವಾಹನ ಸಂಚಾರದಲ್ಲೂ ಅಗತ್ಯ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಪ್ರಮುಖವಾಗಿ ಗ್ರಾಮೀಣ ಭಾಗದ ಒಳ ರಸ್ತೆಗಳಲ್ಲಿ ಸಂಚರಿಸುವಾಗ ವಾಹನಗಳ ವೇಗ ಕಡಿಮೆ ಮಾಡಬೇಕು ಎಂದವರು ತಿಳಿಸಿದರು.
ಎಸ್‌ಐ ಸುದರ್ಶನ್ ಮಾತನಾಡಿದರು. ಇದೇ ವೇಳೆ ಟಿಪ್ಪರ್, ಲಾರಿಗಳ ಅಕ್ರಮ, ವೇಗ ಹಾಗೂ ನಿರ್ಲಕ್ಷ್ಯತನದ ಸಂಚಾರದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆಲೂರು ಹಾಗೂ ಹರ್ಕೂರು ಗ್ರಾಮದ ಎಲ್ಲ ಕಲ್ಲು, ಮಣ್ಣು ಜಲ್ಲಿ, ಮರಳು ಇತ್ಯಾದಿ ಸರಕು ಸಾಗಾಟದ ಲಾರಿ ಮಾಲಕರು, ಚಾಲಕರು, ಕಲ್ಲು ಕೋರೆಗಳ ಮಾಲಕರು, ಇತರೆ ವಾಹನಗಳ ಚಾಲಕ- ಮಾಲಕರೊಂದಿಗೆ ಕಾನೂನು ಮಾಹಿತಿಯನ್ನು ನೀಡಲಾಯಿತು.
ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ್ ಎನ್.ದೇವಾಡಿಗ, ಸದಸ್ಯರಾದ ರವಿ ಶೆಟ್ಟಿ, ಆಲೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ, ಲಾರಿ ಮಾಲಕರು, ಚಾಲಕರು, ಉದ್ಯಮಿಗಳು, ಇತರೆ ವಾಹನ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.





