ಅಂಪಾರು ಸೊಸೈಟಿ ಸಿಇಓನಿಂದ ಕೋಟ್ಯಂತರ ರೂ. ಅವ್ಯವಹಾರ ಆರೋಪ: ಪ್ರಕರಣ ದಾಖಲು

ಶಂಕರನಾರಾಯಣ, ಜ.4: ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ 2023-2024ನೇ ಸಾಲಿನಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ)ಯಾಗಿ ಕರ್ತವ್ಯ ನಿರ್ವಹಿಸಿದ್ದ ಸದಾಶಿವ ವೈದ್ಯ ಕೋಟ್ಯಂತರ ರೂ. ಅವ್ಯವಹಾರ ಎಸಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವ ವೈದ್ಯ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಡ್ಡಿ ಖಾತೆಗೆ ನಕಲಿ ಖರ್ಚು ಬರೆದು, ನಕಲಿ ಠೇವಣಿ ಸೃಷ್ಟಿಸಿ, ಉಳಿತಾಯ ಖಾತೆಯಲ್ಲಿ ಅವ್ಯವಹಾರ ಮಾಡಿ ಒಟ್ಟು 3,95,65,000ರೂ. ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದನು. ಎಲ್ಲಾ ಹೊಂದಾಣಿಕೆ ಲೆಕ್ಕಗಳು ಸಂಘದ ಕಂಪ್ಯೂಟರ್‌ನಲ್ಲಿರುವ ದಾಖಲೆಗಳ ಮೂಲಕ ದಾಖಲಾಗಿದೆ.
ಸದಾಶಿವ ವೈದ್ಯ ನಕಲಿ ಠೇವಣಿ ಖಾತೆ, ಉಳಿತಾಯ ಖಾತೆ, ಸಾಲದ ಖಾತೆಗಳು, ಆತನ ಸಂಬಂಧಿಕರಿಗೆ ಸೇರಿದ ಖಾತೆಯ ಮೂಲಕ ಸಂಘದ ಹಣ ಪಡೆದುಕೊಂಡಿದ್ದು, ಪ್ರಸ್ತುತ ಸಿಇಓ ಪ್ರವೀಣ ಕುಮಾರ್ ಶೆಟ್ಟಿ ಅವರಿಗೆ ಈ ವಿಷಯ ಪರಿಶೀಲನೆ ಸಂದರ್ಭ ತಿಳಿದುಬಂದಿದೆ. ಸದಾಶಿವ ವೈದ್ಯ ಸಂಸ್ಥೆ ಮತ್ತು ಗ್ರಾಹಕರಿಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ಪಾಸ್ ವರ್ಡ್ ಸೃಷ್ಟಿಸಿ ಒಟ್ಟು 3,95,65,000ರೂ. ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿರುವುದಾಗಿ ದೂರಲಾಗಿದೆ.





