Udupi: ಕುಂದಬಾರಂದಾಡಿಯಲ್ಲಿ ಅಪರೂಪದ ಪುರಾತನ ಮಹಿಷಮರ್ದಿನಿ ಶಿಲ್ಪ ಪತ್ತೆ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕುಂದಬಾರಂದಾಡಿಯಲ್ಲಿ ಅತ್ಯಂತ ಜೀರ್ಣಾವಸ್ಥೆಯಲ್ಲಿರುವ ದೇವಾಲಯದಲ್ಲಿ ಒಂದು ಅಪರೂಪದ ಮಹಿಷಮರ್ದಿನಿಯ ಶಿಲ್ಪ ಕಂಡುಬಂದಿದೆ ಎಂದು ಪುರಾತತ್ವ ಸಂಶೋಧಕ, ವಿದ್ವಾಂಸ ಹಾಗೂ ಉಡುಪಿಯ ಆದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.
ಕುಂದಬಾರಂದಾಡಿ ದೇವಾಲಯದ ಮಹಿಷಮರ್ದಿನಿಯು, ಆರು ಕೈಗಳನ್ನು ಹೊಂದಿದ್ದು, ಬಲಭಾಗದ ಮೊದಲ ಕೈಯಲ್ಲಿ ತ್ರಿಶೂಲ, ಎರಡನೇ ಕೈಯಲ್ಲಿ ಖಡ್ಗ, ಮೂರನೇ ಕೈಯಲ್ಲಿ ಗಧೆಯನ್ನು ಹಿಡಿದಿದ್ದಾಳೆ. ಎಡಭಾಗದ ಮೊದಲ ಕೈಯನ್ನು ಮಹಿಷನ ಬೆನ್ನಿನ ಮೇಲೆ ಇರಿಸಲಾಗಿದೆ. ಎರಡನೇ ಕೈ ತುಂಡಾಗಿದ್ದು, ಮೂರನೇ ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದಾಳೆ. ತನ್ನ ಬಲಗಾಲನ್ನು ಮಹಿಷನ ತಲೆಯ ಮೇಲೆ ಇಟ್ಟು ಮೆಟ್ಟಿ ತ್ರಿಶೂಲದಿಂದ ಆಳವಾಗಿ ಮಹಿಷನ ದೇಹವನ್ನು ಇರಿದಂತೆ ಚಿತ್ರಿಸಲಾಗಿದೆ.
ಮಹಿಷಮರ್ದಿನಿಯ ಮುಖಭಾವ ಶಿಷ್ಠವಾಗಿದೆ. ದಪ್ಪ ತುಟಿ, ದಪ್ಪನೆಯ ಮೂಗು, ಉಬ್ಬಿಕೊಂಡಿರುವ ಕಣ್ಣಾಲಿಗಳು ಅಗಲವಾದ ಮುಖ ಸ್ಥಳೀಯ ಭೂತಾರಾಧನೆಯ ದೈವಗಳ ಮುಖಭಾವವನ್ನು ನೆನಪಿಸುತ್ತದೆ. ಕರಂಡ ಮುಕುಟವನ್ನು ಧರಿಸಿರುವ ದೇವಿಯು ಸ್ಥಳೀಯ ಸಂಸ್ಕೃತಿ ಮತ್ತು ಭಾರತೀಯ ಶಿಲ್ಪ ಶೈಲಿಯ ಸುಂದರ ಸಂಯೋಜನೆಯಾಗಿದೆ. ದೇವಿಯ ಗದೆಯ ಕೆಳಭಾಗದಲ್ಲಿ ಒಂದು ಚಿಕ್ಕ ಸ್ತ್ರೀ ಶಿಲ್ಪವಿದ್ದು ಅದು ಬಹುಶಃ ಮಹಿಷನ ಪತ್ನಿಯ ಶಿಲ್ಪವಾಗಿರಬಹುದು ಎಂದು ಪ್ರೊ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಬಾರಂದಾಡಿಯಮಹಿಷಮರ್ಧಿನಿ ದೇವಾಲಯ ದಕ್ಷಿಣ ದಕ್ಕಿನಲ್ಲಿದೆ. ಉತ್ತರ, ಪೂರ್ವ ಮತ್ತು ಪಶ್ಚಿಮದಲ್ಲಿ ಇನ್ನು ಮೂರು ಮಹಿಷಮರ್ಧಿನಿ ದೇವಾಲಯಗಳಿವೆ. ಐದನೆಯದು ಪುರುಷ ಶಕ್ತಿ ಅಂದರೆ ಶಿವ ದೇವಾಲಯ. ಆದ್ದರಿಂದ ಕುಂದಬಾರಂದಾಡಿ ಮಹಿಷಮರ್ದಿನಿ ದೇವಾಲಯಗಳು ಪಂಚದುರ್ಗಾ ಪರಂಪರೆಗೆ ಸೇರಿದ ದೇವಾಲಯಗಳ ಗುಚ್ಛವಾಗಿದ್ದು, ನಿಸರ್ಗದ ಪಂಚತತ್ವದ ಸಂಕೇತವಾಗಿವೆ. ಕುಂದಬಾರಂದಾಡಿ ಮಹಿಷಮರ್ದಿನಿ ದಕ್ಷಿಣ ದಿಕ್ಕಿನಲ್ಲಿರುವುದರಿಂದ ಆಕೆ, ರಾಕ್ಷಸೀ ಸತ್ವದ ಸಂಕೇತವಾಗಿದ್ದಾಳೆ. ಶಿಲ್ಪದ ಶೈಲಿಯು 15ನೇ ಶತಮಾನಕ್ಕೆ ಸರಿ ಹೊಂದುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ಈ ಸಂಶೋಧನೆಗೆ ಸಹಾಯ ಮಾಡಿದ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಂದ್ರ ಪೂಜಾರಿ, ಕಾರ್ಯದರ್ಶಿ ರಘುರಾಮ ಪೂಜಾರಿ ಅಲ್ಲದೇ ಸೀತಾರಾಮ ಪೂಜಾರಿ, ಸಂಜೀವ ಬಿಲ್ಲವ ಹಾಗೂ ಅರ್ಚಕರಾದ ಚೆನ್ನಕೇಶವ ಉಪಾಧ್ಯಾಯ, ತಂತ್ರಿಗಳಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಹಾಗೂ ಆದಿಮ ಕಲಾ ಸಂಶೋಧನಾ ತಂಡದ ಮುರುಳೀಧರ ಹೆಗಡೆ, ಶ್ರೇಯಸ್, ಗೌತಮ್ ಮತ್ತು ಭಾನುಮತಿಯವರಿಗೆ ಆಭಾರಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.
ಕರಾವಳಿಯಲ್ಲಿ ಪುರಾತನ ಮಾತೃ ಆರಾಧನಾ ಪಂಥ
ಮಾತೃ ಆರಾಧನೆ, ಜಗತ್ತಿನ ಅತ್ಯಂತ ಪುರಾತನ ಆರಾಧನಾ ಪಂಥ. ಉಡುಪಿ ಜಿಲ್ಲೆಯೂ ಅತ್ಯಂತ ಪುರಾತನ ಶಾಕ್ತ ಆರಾಧನೆಯ ಕೇಂದ್ರ. ಜಿಲ್ಲೆಯ ಅವಲಕ್ಕಿಪಾರೆಯಲ್ಲಿ ಪ್ರಾಗೈತಿಹಾಸಿಕ ಕಾಲದ ಮಾತೃದೇವತೆಯ ಆದಿಮ ಕಲೆಯ ಚಿತ್ರವಿದೆ. ಮಾತೃದೇವತೆಯನ್ನು ವಿವಿಧ ರೂಪಗಳಲ್ಲಿ ಭಾರತದಲ್ಲಿ ಆರಾಧಿಸಲಾಗುತ್ತದೆ. ಮಹಿಷಮರ್ಧಿನಿ ಪಂಥವು ಪಶ್ಚಿಮ ಭಾರತದಲ್ಲಿ ಕ್ರಿಸ್ತ ಶಕಾರಂಭದಲ್ಲಿ ಆರಂಭವಾಗಿ, ದಕ್ಷಿಣ ಭಾರತದಲ್ಲಿಯೂ ಜನಪ್ರಿಯವಾಯಿತು.
ಉಡುಪಿ ಮಹಿಷಮರ್ದಿನಿ ಪಂಥದ ಪ್ರಮುಖ ಕೇಂದ್ರ. ಜಿಲ್ಲೆಯ ಬೆಳ್ಮಣ್ಣಿನ ಮಹಿಷಮರ್ದಿನಿ ದೇವಾಲಯವು ಜಿಲ್ಲೆಯ ಅತ್ಯಂತ ಪ್ರಾಚೀನ ದೇವಾಲಯ. ಇಲ್ಲಿ ಸಿಕ್ಕಿದ ಎರಡನೇ ಆಳುವರಸನ ಬೆಳ್ಮಣ್ ತಾಮ್ರಪಟ ಕನ್ನಡದ ಅತ್ಯಂತ ಪುರಾತನ ತಾಮ್ರಪಟವೆನಿಸಿದ್ದು ಈ ಶಾಸನದಲ್ಲಿ ಬೆಳ್ಮಣ್‌ನ ದೇವಿಯನ್ನು ವಿಂಧ್ಯವಾಸಿನಿ ಹಾಗೂ ಮಹಾಮುನಿ ಸೇವಿತೆ ಎಂದು ಕೊಂಡಾಡಲಾಗಿದೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.







