ಜ.25ರಿಂದ ಕಾರ್ಕಳ ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ, ಜ.15: ಕಾರ್ಕಳದ ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಜ.25, 26, 27, 28 ಹಾಗೂ 29ರಂದು ಜರಗಲಿದೆ. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ಧರಾಗಿದ್ದೇವೆ ಎಂದು ಬಸಿಲಿಕಾದ ನಿರ್ದೇಶಕ ವಂ.ಆಲ್ಬನ್ ಡಿಸೋಜ ಹೇಳಿದ್ದಾರೆ.
ಕಾರ್ಕಳ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂಬ ಧ್ಯೇಯ ವಾಕ್ಯದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆಯನ್ನು ನೀಡುವ ನವದಿನಗಳ ಪ್ರಾರ್ಥನೆ ಜ.16ರಿಂದ ಆರಂಭಗೊಂಡು ಜ.24ರವರೆಗೆ ನಡೆಯಲಿದೆ. ಜ.24ರಂದು ಬೆಳಗ್ಗೆ 9ಗಂಟೆಗೆ ಆರಾಧನೆ ಹಾಗೂ 9.30ಕ್ಕೆ ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆ ಜರಗಲಿದೆ ಎಂದರು.
ಜ.25ರಂದು ಅಪರಾಹ್ನ 3ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 36 ಹಾಗೂ ಕನ್ನಡ ಭಾಷೆಯಲ್ಲಿ 9 ಹೀಗೆ ಒಟ್ಟು 45 ದಿವ್ಯ ಪೂಜೆಗಳನ್ನು ಅರ್ಪಿಸಲಾಗುತ್ತದೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಉಡುಪಿ, ಮಂಗಳೂರು, ಕಾರವಾರ, ಅಲಹಾಬಾದ್, ಅಜ್ಮೀರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಮತ್ತು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರು ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸಲಿದ್ದಾರೆ.
ಭಕ್ತಾಧಿಗಳ ಸುರಕ್ಷತೆಗಾಗಿ ಬಸಿಲಿಕಾದ ಒಳಗಡೆ ಹಾಗೂ ಬಸಿಲಿಕದ ವಠಾರದಲ್ಲಿ 72ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಬಸಿಲಿಕಾದ ’ಪವಾಡ ಮೂರ್ತಿ’ ಪ್ರತಿಷ್ಠಾಪಿಸಿದ ಸಮೀಪ ಕಥೋಲಿಕ್ ಕ್ರೈಸ್ತರಿಗೆ ಪಾಪ ನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ನೀಡಲಾಗಿದೆ.
ಬಸಿಲಿಕದ ವಠಾರದಲ್ಲಿ ಬಸಿಲಿಕದ ಅಧಿಕೃತ ಸ್ಟಾಲ್ನಲ್ಲಿ ಮಾತ್ರ ಮೊಂಬತ್ತಿ ಮಾರಾಟ ಮಾಡಲು ಅವಕಾಶ ಮಾಡಲಾಗಿದೆ. ಇತರರಿಗೆ ಬಸಿಲಿಕಾ ವಠಾರದಲ್ಲಿ ಮೊಂಬತ್ತಿ ಮಾರಾಟ ಮಾಡಲು ಸಂಪೂರ್ಣವಾಗಿ ನಿಷೇಧಿಸ ಲಾಗಿದೆ. ಭಕ್ತರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆಗಾಗಿ ಗರಿಷ್ಟ ಸಂಖ್ಯೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಅತೀ ದೊಡ್ಡ ಮೂರ್ತಿ ಯನ್ನು ಬಸಿಲಿಕದಲ್ಲಿ ಪ್ರತಿಷ್ಠಾಪಿಸಲಾಗಿದೆ. ಜ.29ರಂದು ಸಂಜೆ 6ಗಂಟೆಗೆ ಬಲಿಪೂಜೆಯ ನಂತರ ಬಸಿಲಿಕಾ ವಠಾರದಲ್ಲಿ ಅತಿಥಿ ಕಲಾವಿದರ ಕೂಡುವಿಕೆ ಯೊಂದಿಗೆ ಜಿ.ಕೆ.ಶ್ರೀನಿವಾಸ್ ಸಾಲ್ಯಾನ್ ವಿರಚಿತ ಸತ್ಯ ದರ್ಶನ ಎಂಬ ಕನ್ನಡ ಯಕ್ಷಗಾನ ಪ್ರಸಂಗ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಸದಸ್ಯರಾದ ವಂದೀಶ್ ಮಥಾಯಸ್, ಮೆಲ್ವಿನ್ ಕ್ಯಾಸ್ತಲಿನೊ, ಜೋನ್ಸನ್ ಡಿಸಿಲ್ವಾ ಉಪಸ್ಥಿತರಿದ್ದರು.
ವಾಹನ ನಿಲುಗಡೆಗೆ ವ್ಯವಸ್ಥೆ
ಕಾಬೆಟ್ಟು ದ್ವಾರದ ಮೂಲಕ ಬರುವ ವಾಹನಗಳ ದಟ್ಟಣೆಯಿಂದ ಆಗುವ ಅಡಚಣೆಯನ್ನು ನಿವಾರಿಸಲು, ಪುಕ್ಕೇರಿ ಯಿಂದ ದೂಪದಕಟ್ಟೆ ಮೂಲಕ ವಾಹನಗಳನ್ನು ಕಳುಹಿಸಿ ದೂಪದಕಟ್ಟೆ ದ್ವಾರ ಪ್ರವೇಶಿಸುವಾಗ ಎಡಬದಿಗೆ ವಿಸ್ತಾರವಾದ ವಾಹನ ನಿಲುಗಡೆ ಸ್ಥಳ, ಗಾರ್ಡನ್ ಹೌಸ್ ಹತ್ತಿರ ತಿರುವಿನಲ್ಲಿ ಎಡಬದಿಯಲ್ಲಿ ಹಾಗೂ ಗಾರ್ಡನ್ ಹೌಸ್ ದಾಟಿದ ನಂತರ ಎಡಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ಮುಂದೆ ಬ್ಯಾರಿಕೇಡ್ ಹಾಕಿರುವ ತನಕ ಮಾತ್ರ ರಿಕ್ಷಾ ಸಂಚಾರಕ್ಕೆ ಅವಕಾಶವಿದೆ. ಅಲ್ಲಿಂದ ಮುಂದಕ್ಕೆ ವಾಹನಗಳಿಗೆ ಪ್ರವೇಶವಿಲ್ಲ ಎಂದು ವಂ.ಆಲ್ಬನ್ ಡಿಸೋಜ ಮಾಹಿತಿ ನೀಡಿದರು.
ಕಾಬೆಟ್ಟು ಕಡೆಯಿಂದ ಬರುವ ವಾಹನಗಳಿಗೆ ಪ್ರಸಾದ್ ಟೈಲರ್ ಜಂಕ್ಷನ್ ದಾಟಿ ಮುಂದೆ ಬರುವಾಗ ಬಲಬದಿಯಲ್ಲಿ ಸಂತ ಲೋರೆನ್ಸ್ ಧರ್ಮ ಕೇಂದ್ರದ ಆಡಳಿತಕ್ಕೊಳಪಟ್ಟ ಸಂತ ಲೋರೆನ್ಸ್ ಹೈಸ್ಕೂಲ್ ಶಾಲಾ ಆಟದ ವಿಶಾಲ ವಾದ ಮೈದಾನವನ್ನು ಸಂಪೂರ್ಣವಾಗಿ ವಾಹನ ನಿಲುಗಡೆ ಗಾಗಿಯೇ ಕಾದಿರಿಸಲಾಗಿದೆ. ವಾಹನ ಪಾಸ್ ಹೊಂದಿದ ವಾಹನ ಚಾಲಕರು ತಮ್ಮ ವಾಹನಗಳನ್ನು ಕಾಬೆಟ್ಟು ಮಾರ್ಗವಾಗಿ ತಂದು ಎಡಬದಿಯ ಪಂಚಾಯತ್ ಶೌಚಾಲ ಯದ ಬಳಿ ಎಡಕ್ಕೆ ತಿರುಗಿ ಮುಂದೆ ಸಾಗಿ ಬಲಬದಿಯ ಅತ್ತೂರು ಕಾನ್ವೆಂಟ್ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಹಾಗೂ ಇತರ ಪಾಸ್ ಹೊಂದಿದವರಿಗೆ ವಿಶಾಲವಾದ ಪಾರ್ಕಿಂಗ್ ವಠಾರದಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿದೆ ಎಂದರು.







