ನೋಂದಣಿಗೊಂಡ ಭಾರತ್ ಜೋಡೊ ಯುವ ಸಂಘಕ್ಕೆ ವಾರ್ಷಿಕ ತಲಾ 10 ಲಕ್ಷ ರೂ. ಅನುದಾನ: ಉಡುಪಿ ಡಿಸಿ
ಸಂಘದ ಮಾರ್ಗದರ್ಶಕರಿಗೆ ತರಬೇತಿ ಕಾರ್ಯಾಗಾರ

ಉಡುಪಿ, ನ.19: ನಿಯಮನುಸಾರ ನೋಂದಣಿಯಾದ ಭಾರತ್ ಜೋಡೊ ಸಂಘಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.ಗಳಂತೆ ಸರಕಾರ ಅನುದಾನ ನೀಡಲಿದ್ದು, ಈ ಅನುದಾನದಲ್ಲಿ ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ, ಜಲಸಂರಕ್ಷಣೆ, ಆರೋಗ್ಯ, ಸ್ವಚ್ಛತೆ ಹಾಗೂ ಯುವ ಸಬಲೀಕರಣ ದಂತಹ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡ ಳಿತ, ಜಿಲ್ಲಾ ಪಂಚಾಯತ್ ಉಡುಪಿ ಇವರ ವತಿಯಿಂದ ಭಾರತ್ ಜೋಡೊ ಯುವ ಸಂಘದ ಮಾರ್ಗದರ್ಶಕರಿಗೆ ಆಯೋಜಿಸಲಾದ ಗುರುವಾರ ಆಯೋಜಿಸಲಾದ ತರಬೇತಿ ಕಾರ್ಯಾಗಾರ ದಲ್ಲಿ ಅವರು ಮಾತನಾಡುತ್ತಿದ್ದರು.
ಭಾರತ್ ಜೋಡೊ ಯುವ ಸಂಘಗಳ ನೋಂದಣಿ ಮಾಡುವುದರೊಂದಿಗೆ ಆ ಸಂಘಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆ ತೆರೆಯಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಭಾರತ್ ಜೋಡೊ ಯುವ ಸಂಘಗಳ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಹಾಗೂ ಸಮಿತಿಗಳನ್ನು ರಚಿಸಿ, ಯುವಜನರನ್ನು ಸಬಲೀಕರಣ ಗೊಳಿಸಲು ತಳಮಟ್ಟದ ಆಡಳಿತದಲ್ಲಿ ಸಕ್ರೀಯಪಾಲುದಾರರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಯುವ ಜನತೆಯಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿ ಸಲು, ಗ್ರಾಮ ಪಂಚಾಯತ್ ಹಾಗೂ ನಗರದ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಭಾರತ್ ಜೋಡೊ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಯುವಜನರಲ್ಲಿ ನಾಯಕತ್ವದ ಗುಣ ಬೆಳೆಸಿ, ಅವರನ್ನು ಸಬಲೀಕರಣಗೊಳಿಸಿ, ನಾಳಿನ ಸತ್ಪ್ರಜೆಗಳಾಗಿ ರೂಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಹಾಗೂ ನಗರದ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಘ ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಸಂಘಗಳ ನೋಂದಣಿ ಮಾಡುವಲ್ಲಿ ಮಾರ್ಗದರ್ಶಕರ ಜವಾಬ್ದಾರಿ ಹೆಚ್ಚಿದೆ. ಪ್ರತಿ ಯುವ ಸಂಘವೂ ಸರ್ಕಾರದ ಮಾರ್ಗಸೂಚಿ ಅನ್ವಯ ನೋಂದಣಿ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದ ಅವರು, ಈ ಎಲ್ಲಾ ಕಾರ್ಯಗಳ ಮೇಲ್ವಿಚಾರಣೆಯನ್ನು ತಹಶೀಲ್ದಾರ್‌ರು ನಡೆಸಬೇಕು ಎಂದು ಸ್ವರೂಪ ಟಿ.ಕೆ. ವಿವರಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ನೋಂದಣಿಗೊಂಡ ಎಲ್ಲಾ ಭಾರತ್ ಜೋಡೊ ಸಂಘಗಳನ್ನು ಕ್ಯೂಅರ್ ಕೋಡ್‌ನಲ್ಲಿ ಅಪ್ಲೋಡ್ ಮಾಡಬೇಕು. ಪ್ರತಿ ಸಂಘವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 15 ಜನ ಸದಸ್ಯರನ್ನು ಒಳಗೊಂಡ ಆಂತರಿಕ ಕಾರ್ಯಕಾರಿ ಸಮಿತಿಯನ್ನು ಹೊಂದಿರುತ್ತದೆ. ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಜಿ ಹಾಗೂ 12 ಜನರ ಕಾರ್ಯಕಾರಿ ಸದಸ್ಯರು ಇರಲಿದ್ದಾರೆ ಎಂದ ಅವರು, ಮೀಸಲಾತಿಗೆ ಅನುಗುಣವಾಗಿ ಸಮಿತಿಗಳನ್ನು ರಚಿಸಬೇಕು ಎಂದರು.
ಜಿಲ್ಲೆಯಲ್ಲಿ ಭಾರತ್ ಜೋಡೊ ಯುವ ಸಂಘಗಳ ರಚನೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ, ಮಾರ್ಗದರ್ಶಕರು, ಮಾಸ್ಟರ್ ತರಬೇತುದಾರರು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯ ನಿರ್ವಹಿಸು ವುದರೊಂದಿಗೆ ಯುವ ಸಂಘಗಳ ಸ್ಥಾಪನೆ ಹಾಗೂ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಸಂಘದ ಜಿಲ್ಲಾ ಸಂಘಟಕ ಡಾ.ಗಣನಾಥ್ ಶೆಟ್ಟಿ ಎಕ್ಕಾರು ಮಾತನಾಡಿ, ಯಾವುದೇ ಒಂದು ಸಂಘಟನೆಯಲ್ಲಿ ಕೆಲಸ ಮಾಡುವಾಗ ಆ ಸಂಘಟನೆಗಳ ಕಾರ್ಯ ವೈಖರಿಯನ್ನು ಅರ್ಥೈಸಿಕೊಂಡಲ್ಲಿ ಮಾತ್ರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಭಾರತ್ ಜೋಡೊ ಯುವ ಸಂಘ ಸ್ಥಾಪನೆಯಲ್ಲಿ ಮಾರ್ಗದರ್ಶಕರೇ ಅಡಿಪಾಯದ ಸ್ಥಂಭಗಳಿದ್ದಂತೆ. ಅವರು ತಮ್ಮ ಕಾರ್ಯ ಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
ಗ್ರಾಮೀಣ ಮತ್ತು ನಗರದ 16-35 ವಷರ್ದೊಳಗಿನ ಯುವಜನರಲ್ಲಿ ಕ್ರೀಡೆ, ಆರೋಗ್ಯಕರ ಜೀವನ ಶೈಲಿ, ಯುವಕ ರಲ್ಲಿ ನಾಯಕತ್ವ ಗುಣ ಬೆಳೆಸುವುದು ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆ ಕೈಗೊಳ್ಳಲು ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಡಾ.ಎಕ್ಕಾರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ತಹಶೀಲ್ದಾರ್ ಗಳಾದ ಅನಂತಶಂಕರ್ ಬಿ, ರಾಕೇಶ್ ಫ್ರಾನ್ಸಿಸ್ ವಿಕ್ಟರ್ ಹಾಗೂ ಅಶೋಕ್ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಷನ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.






