ಶಾಲಾ ಕ್ರೀಡಾಕೂಟದಲ್ಲಿನ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಮನವಿ

ಕುಂದಾಪುರ, ಆ.7: ಶಿಕ್ಷಣ ಇಲಾಖೆ ನಡೆಸುತ್ತಿರುವ ಅವೈಜ್ಞಾನಿಕ ಕ್ರೀಡಾಕೂಟದಿಂದ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಉಡುಪಿ ಜಿಲ್ಲಾ ಘಟಕ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಕುಂದಾಪುರದ ತಹಶೀಲ್ದಾರ್ ಪ್ರದೀಪ್ ಕೆ. ಕುರುಡೇಕರ್ ಮೂಲಕ ಮನವಿ ಸಲ್ಲಿಸಲಾಯಿತು.
ಶಾಲಾ ಕ್ರೀಡಾಕೂಟದಲ್ಲಿ ಹಿಂದಿನಂತೆಯೇ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಪ್ರತ್ಯೇಕ ವಿಭಾಗ ಮಾಡಿ ಕ್ರೀಡಾಕೂಟವನ್ನು ನಡೆಸಬೇಕು. ಕ್ರೀಡೆಯಲ್ಲಿ ಮಕ್ಕಳು ಸ್ಫೂರ್ತಿದಾಯಕವಾಗಿ ಭಾಗವಹಿಸಲು ಹಾಗೂ ಸಾಮರ್ಥ್ಯ ವಿರುವ ಕ್ರೀಡಾಪಟುಗಳನ್ನು ಎಳೆಯ ವಯಸ್ಸಿನಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಲು ಪ್ರಾಥಮಿಕ ಶಾಲೆಯ ಕ್ರೀಡಾಕೂಟವನ್ನು ಪ್ರತ್ಯೇಗೊಳಿಸಬೇಕು. ಮತ್ತು ಪ್ರೌಢಶಾಲೆಯ ಮಕ್ಕಳು ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಸ್ಪರ್ಧಿಸಿ ವಿಜಯಶಾಲಿಯಾಗುವುದನ್ನು ತಪ್ಪಿಸಬೇಕು.
ಪ್ರಾಥಮಿಕ ಶಾಲೆಯ ಎಳೆಯ ವಿದ್ಯಾರ್ಥಿಗಳು ತನ್ನ ಕ್ರೀಡಾ ಸಾಧನೆಯಿಂದ ಸ್ಪೂರ್ತಿಗೊಂಡು ಮುಂದೆ ಹೆಚ್ಚಿನ ತರಬೇತಿಗೊಳಪಟ್ಟಾಗ, ಪ್ರೌಢ ಶಾಲೆಗೆ ಮಟ್ಟದಲ್ಲಿ ಕ್ರೀಯಾಶೀಲತೆಯಿಂದ ಮತ್ತು ತರಬೇತಿಯಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಬೆಳೆಯುವ ಮೊಳಕೆಯನ್ನು ಚಿವುಟದೇ ಹಿಂದಿನತೆಯೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಪ್ರತ್ಯೇಕ ಕ್ರೀಡಾಕೂಟವನ್ನು ನಡೆಸಬೇಕೆಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳ ಎಸ್.ಡಿ.ಎಮ್.ಸಿ ಮತ್ತು ಪೋಷಕರ ಪರವಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ. ನಾಗರಾಜ್, ಕುಂದಾಪುರ ಪುರಸಭೆ ಘಟಕದ ಅಧ್ಯಕ್ಷ ಅಶ್ವತ್ ಕುರ್ಮಾ, ಕಾಪು ತಾಲೂಕು ಉಸ್ತುವಾರಿ ಅಷ್ಪಾಕ್ ಮೊದಲಾದವರು ಉಪಸ್ಥಿತರಿದ್ದರು.







