‘ಯುವ ಆಯೋಗ’ ಸ್ಥಾಪಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

ಉಡುಪಿ, ಜ.23: ಕರ್ನಾಟಕದ ಯುವಜನರ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣ ಸ್ಥಾಪಿಸಬೇಕೆಂದು ಆಗ್ರಹಿಸಿ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಉಡುಪಿ ವತಿಯಿಂದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಯುವಜನರು ವಾಸಿಸುತ್ತಿದ್ದು, ಅವರು ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ, ನಾಮಾಜಿಕ ಭದ್ರತೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಮಾನಸಿಕ ಒತ್ತಡ, ಮಾದಕ ವ್ಯಸನ, ಸೈಬರ್ ವಂಚನೆ, ಸಾಮಾಜಿಕ ಅಸುರಕ್ಷತೆ ಮತ್ತು ನಿರ್ಧಾರ ಪ್ರಕ್ರಿಯೆಗಳಲ್ಲಿ ಪ್ರತಿನಿಧಿತ್ವದ ಕೊರತೆ ಮುಂತಾದ ಗಂಭೀರ ಸಮಸ್ಯೆ ಗಳು ಯುವಜನರಲ್ಲಿ ಹೆಚ್ಚುತ್ತಿವೆ.
2022ರಲ್ಲಿ ರಾಜ್ಯ ಯುವ ನೀತಿ ಇದ್ದರೂ ಸಹ, ಅದರ ಪರಿಣಾಮಕಾರಿ ಅನುಷ್ಠಾನ, ವಿವಿಧ ಇಲಾಖೆಗಳ ಯುವ ಕಾರ್ಯಕ್ರಮಗಳ ಸಮನ್ವಯ, ಯುವಜನರ ಅಹವಾಲುಗಳ ಪರಿಹಾರ ಹಾಗೂ ಸಾಕ್ಷಾಧಾರಿತ ನೀತಿ ಶಿಫಾರಸು ಗಳನ್ನು ನೀಡುವ ಕಾನೂನುಬದ್ದ ಸಂಸ್ಥೆ ರಾಜ್ಯದಲ್ಲಿ ಪ್ರಸ್ತುತ ಇಲ್ಲ. ಇದರಿಂದ ಯುವ ಕಲ್ಯಾಣ ಕ್ಷೇತ್ರದಲ್ಲಿ ಗಂಭೀರ ಸಂಸ್ಥಾತ್ಮಕ ಶೂನ್ಯತೆ ಉಂಟಾಗಿದೆ.
ಕೇರಳ, ಅಸ್ಸಾಂ, ಮಿಜೋರಾಂ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಅವು ಯುವ ಕಲ್ಯಾಣ, ಉದ್ಯೋಗ ಮಾರ್ಗದರ್ಶನ, ಮಾನಸಿಕ ಆರೋಗ್ಯ, ಮಾದಕ ವಸ್ತು ತಡೆ ಮತ್ತು ನಾಯಕತ್ವ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಹೆಚ್ಚಿನ ಯುವಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯಕ್ಕೂ ಸಹ ಇಂತಹ ಅಯೋಗದ ಅಗತ್ಯ ತೀವ್ರವಾಗಿದೆ.
ಕರ್ನಾಟಕ ರಾಜ್ಯ ಯುವ ಆಯೋಗವು ಯುವ ನಾಗರಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿ, ಪಾರದರ್ಶಕತೆ, ಭಾಗವಹಿಸುವಿಕೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸುವುದರ ಜೊತೆಗೆ ಯುವ ಜನರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬಲ್ಲದು. ಆದ್ದರಿಂದ, ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆಗಾಗಿ ಅಗತ್ಯ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಾಲಿಡಾರಿಟಿ ರಾಜ್ಯಾ ಕಾರ್ಯದರ್ಶಿ ಅಫ್ವಾನ್ ಬಿ. ಹೂಡೆ, ಜಿಲ್ಲಾ ಸಮಿತಿ ಸದಸ್ಯರಾದ ಝಕ್ರಿಯಾ ನೇಜಾರು ಹಾಗೂ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.







