ಆರೋಗ್ಯ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಬಿಡಲು ಆರೋಗ್ಯ ಸಚಿವರಿಗೆ ಮನವಿ

ಉಡುಪಿ, ಡಿ.23: ಜನಸಂಖ್ಯೆ ಆಧಾರದ ಮೇಲೆ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚುವ ನಿರ್ಧಾರದಿಂದ ಗ್ರಾಮೀಣ, ಅರಣ್ಯ ಪ್ರದೇಶ ಮತ್ತು ಹಿಂದುಳಿದ ಭಾಗದ ಸಾವಿರಾರು ಜನರು ಮೂಲ ಭೂತ ಆರೋಗ್ಯ ಸೇವೆಯಿಂದ ವಂಚಿತರಾಗುವ ಭೀತಿ ಉಂಟಾಗಿದ್ದು, ಆರೋಗ್ಯ ಇಲಾಖೆ ತಕ್ಷಣ ನಿರ್ಧಾರವನ್ನು ಹಿಂತೆಗೆದುಕೊಳ್ಳ ಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಪತ್ರ ಬರೆದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾವ್ ಅವರಿಗೆ ಮನವಿ ಮಾಡಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಮಲ್ಪೆ ಬಂದರಿನಲ್ಲಿ ಪರ ಊರಿನಿಂದ ಬಂದಿರುವ ಸುಮಾರು 35,000 ಮೀನು ಕಾರ್ಮಿಕರು ಹಾಗೂ ಕ್ಷೇತ್ರದ ಕೆಲವೆಡೆ 25,000ಕ್ಕೂ ಅಧಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ವಲಸಿಗರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದು ಉದ್ಯೋಗ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಮೇಲೆಯೇ ಅವಲಂಬಿತರಾಗಿದ್ದು, ಸ್ಥಳೀಯ ದಾಖಲೆಗಳಿಲ್ಲದೇ ಸ್ಥಳೀಯ ಜನಗಣತಿಯಲ್ಲಿ ಪರಿಗಣಿಸಲ್ಪಟ್ಟಿಲ್ಲ.
ಜಿಲ್ಲೆಯ ಜನರ ಹಾಗೂ ವಲಸಿಗರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಕೇಂದ್ರಗಳನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ನಿರ್ಧಾರ ವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಜೊತೆಗೆ, ಜಿಲ್ಲೆಯ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ ಮಾಡಿ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಉಳಿದಿರುವ ವೈದ್ಯರು, ನರ್ಸ್ಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಯಶ್‌ಪಾಲ್ ಮನವಿಯಲ್ಲಿ ತಿಳಿಸಿದ್ದಾರೆ.





