ನೇಜಾರು ತಾಯಿ ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯ ಕಾರಿಗಾಗಿ ಬ್ಯಾಂಕಿನಿಂದ ಕೋರ್ಟ್ಗೆ ಅರ್ಜಿ

ಆರೋಪಿ ಪ್ರವೀಣ್ ಚೌಗುಲೆ
ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಭೀಕರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಕೃತ್ಯಕ್ಕೆ ಬಳಸಿದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡುವಂತೆ ಸಂಬಂಧಪಟ್ಟ ಬ್ಯಾಂಕಿನವರು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಇಂದು ಅರ್ಜಿ ಸಲ್ಲಿಸಿದ್ದಾರೆ.
ಆರೋಪಿ ಕೃತ್ಯ ಎಸಗುವ ದಿನ ತನ್ನ ಕಾರಿನಲ್ಲಿ ಹೆಜಮಾಡಿ ಟೋಲ್ ಗೇಟ್ವರೆಗೆ ಬಂದು, ಬಳಿಕ ಬಸ್, ಬೈಕ್ ಬಳಸಿ ನೇಜಾರಿಗೆ ಬಂದು, ವಾಪಾಸ್ಸು ಹೆಜಮಾಡಿವರೆಗೆ ಬಂದು ಅದೇ ಕಾರಿನಲ್ಲಿ ತೆರಳಿದ್ದಾನೆ. ಆ ಹಿನ್ನೆಲೆಯಲ್ಲಿ ಕೃತ್ಯಕ್ಕೆ ಬಳಸಿದ ಈ ಕಾರನ್ನು ಪೊಲೀಸರು ವಶಡಿಸಿಕೊಂಡಿದ್ದರು.
ಆರೋಪಿ ಈ ಕಾರಿಗೆ 24ಸಾವಿರ ರೂ. ತಿಂಗಳ ಕಂತು ಬ್ಯಾಂಕಿಗೆ ಪಾವತಿಸುತ್ತಿದ್ದು, ಬಂಧನದ ಬಳಿಕ ಯಾವುದೇ ಕಂತು ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕಿನವರು ಈ ಕಾರನ್ನು ಸೀಝ್ ಮಾಡಲು ತಮ್ಮ ವಶಕ್ಕೆ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ವಿಶೇಷ ಸರಕಾರಿ ಅಭಿಯೋಜಕರು ಹಾಗೂ ಆರೋಪಿ ಕೂಡ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಆದುದರಿಂದ ಆಕ್ಷೇಪಣೆ ಹಾಗೂ ಮುಂದಿನ ವಿಚಾರಣೆಗೆ ಫೆ.7ಕ್ಕೆ ದಿನಾಂಕ ನಿಗದಿಪಡಿಸಿ ನ್ಯಾಯಾಧೀಶರು ಆದೇಶ ನೀಡಿದರು.
ವಾದ ಪ್ರತಿವಾದ ಮಂಡನೆ: ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂದು ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಇಂದು ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳನ್ನು ಮಂಡಿಸಲಾಯಿತು.
ಅರ್ಜಿ ಸಂಬಂಧ ಆರೋಪಿ ಪರ ವಕೀಲ ದಿಲ್ರಾಜ್ ರೋಹಿತ್ ಸ್ವಿಕೇರಾ ಹಾಗೂ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಕೆ. ವಾದಗಳನ್ನು ಮಂಡಿಸಿದರು. ಇಬ್ಬರ ವಾದಗಳನ್ನು ನ್ಯಾಯಾಧೀಶ ಸಮಿವುಲ್ಲಾ ಆಲಿಸಿದರು. ಈ ಬಗ್ಗೆ ಅಂತಿಮ ತೀರ್ಪನ್ನು ನ್ಯಾಯಾಧೀಶರು ಮುಂದೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.







