ಉಡುಪಿ ನಗರಸಭೆ, ಕಾರ್ಕಳ, ಕುಂದಾಪುರ ಪುರಸಭೆಗಳಿಗೆ ಆಡಳಿತಾಧಿಕಾರಿಗಳ ನೇಮಕ
ಉಡುಪಿ: ಪ್ರಸ್ತುತ ರಾಜ್ಯದಲ್ಲಿರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ಚುನಾಯಿತ ಕೌನ್ಸಿಲ್ ಅವಧಿಯು ಇದೀಗ ಮುಕ್ತಾಯಗೊಂಡಿದೆ.
ಆದ್ದರಿಂದ ಕರ್ನಾಟಕ ಪೌರಸಭೆಗಳ ಕಾಯ್ದೆ ೧೯೬೪ರ ಕಲಂ-೩೮೯ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವಧಿ ಮುಕ್ತಾಯಗೊಂಡಿರುವ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವವರೆಗೂ ಅವುಗಳ ದಿನನಿತ್ಯದ ಕಾರ್ಯ ನಿರ್ವಹಣೆಗಾಗಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಹಿತದೃಷ್ಟಿಯಿಂದ ಆಡಳಿತಾಧಿಕಾರಿಗಳನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಅದರಂತೆ ಅ.೩೦ರಿಂದ ಉಡುಪಿ ಜಿಲ್ಲಾಧಿಕಾರಿಯವರು ಉಡುಪಿ ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅದೇ ರೀತಿ ಅವಧಿ ಮುಗಿದ ಕಾರ್ಕಳ ಪುರಸಭೆಗೆ ಅ.೨೮ರಿಂದ ಕುಂದಾಪುರ ಉಪವಿಭಾಗಾಧಿಕಾರಿಯವರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಕುಂದಾಪುರ ಪುರಸಭೆಗೆ ನ.೪ರಿಂದ ಕುಂದಾಪುರ ಉಪವಿಭಾಗದ ಉಪವಿಭಾಗಾಧಿಕಾರಿ ಅವರು ಆಡಳಿತಾಧಿಕಾರಿಯಾಗಿದ್ದಾರೆ.
ಜಿಲ್ಲೆಯ ಕಾಪು ಪುರಸಭೆಯ ಅಧಿಕಾರಾವಧಿ ಇನ್ನೂ ಮುಕ್ತಾಯಗೊಂಡಿಲ್ಲ. ಆದರೆ ಸಾಲಿಗ್ರಾಮದ ಪಟ್ಟಣ ಪಂಚಾಯತ್‌ನ ಅವಧಿ ಮುಗಿದಿದ್ದು, ನ.೩ರಿಂದ ಬ್ರಹ್ಮಾವರದ ತಹಶೀಲ್ದಾರರು ಅದರ ಆಡಳಿತಾಧಿಕಾರಿ ಯಾಗಿದ್ದಾರೆ.







