ಸ್ಪಂದಿಸದ ಬಿಎಲ್‌ಓಗಳ ವಿರುದ್ಧ ಸೂಕ್ತ ಕ್ರಮ: ಉಡುಪಿ ಡಿಸಿ ಸ್ವರೂಪಾ ಟಿ.ಕೆ.

ಉಡುಪಿ, ಜು.10: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಗೆ ಸಂಬಂಧಿಸಿ ಬಿಎಲ್‌ಓಗಳಿಗೆ ಸತತವಾಗಿ ಐದಾರು ಬಾರಿ ತರಬೇತಿ ನೀಡಲಾಗಿದೆ. ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸುವ ಹಾಗೂ ಸಂಗ್ರಹಿಸುವ ಬಗ್ಗೆ ಬಿಎಲ್‌ಓಗಳು ಸ್ಪಂದಿಸದಿರುವುದು ನಮ್ಮ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗ ದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ಎಸ್‌ಐಆರ್ (ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ) ಕುರಿತು ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮನೆಮನೆಗೆ ಭೇಟಿ ನೀಡಿ ಫಾರ್ಮ್ ನೀಡಲು ಮತ್ತು ಸಂಗ್ರಹಿಸುವಂತೆ ಬಿಎಲ್‌ಓಗಳಿಗೆ ಹಲವು ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇನ್ನೂ ಸೂಚನೆ ನೀಡುವುದಿಲ್ಲ, ಲೋಪ ಎಸಗಿರುವುದು ನಮ್ಮ ಗಮನಕ್ಕೆ ತಂದರೆ ಕ್ರಮ ತೆಗೆದುಕೊಳ್ಳಲಾಗುವುದು. ನಿಧನಗತಿಯಲ್ಲಿ ಕಾರ್ಯನಿರ್ವಹಿಸಿದ ಬಿಎಲ್‌ಓಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ ಎಂದರು.
ಬಿಎಲ್‌ಓಗಳ ಹೆಸರು, ಮೊಬೈಲ್ ನಂಬರ್ ಫಾರ್ಮ್‌ನಲ್ಲಿ ಟ್ಯಾಗ್ ಆಗಿರುವುದರಿಂದ ಇನ್ನು ಅವರನ್ನು ಬದಲಾಯಿ ಸಲು ಅವಕಾಶ ಇಲ್ಲ ಎಂದ ಅವರು, ಬಿಎಲ್‌ಓಗಳಿಗೆ ಸಹಾಯ ಮಾಡಲು ಬಿಎಲ್‌ಎಗಳಿಗೆ ಅವಕಾಶ ನೀಡಲಾಗಿದೆ. ಫಾರ್ಮ್ ಸಂಪೂರ್ಣ ಭರ್ತಿ ಆಗದಿದ್ದರೆ ಬಿಎಲ್‌ಓಗಳನ್ನು ವಾಪಾಸ್ಸು ಕಳುಹಿಸಿ ಭರ್ತಿ ಮಾಡಿಸಲಾಗುವುದು. ಎಲ್ಲವನ್ನು ಪರಿಶೀಲನೆ ಮಾಡಿಯೇ ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದರು.
ಕರಡು ಪ್ರತಿ ಪ್ರಕಟ: ಆ.5ರಂದು ಕರಡು ಪಟ್ಟಿಯನ್ನು ಪ್ರಕಟಿಸಲಾಗು ವುದು. ಕರಡು ಪ್ರತಿಯಲ್ಲಿ ಈ ಪ್ರತಿಯನ್ನು ಎಲ್ಲ ಕಡೆ ಪ್ರಕಟಿಸಲಾಗುವುದು ಮತ್ತು ಸಾಕಷ್ಟು ಪ್ರಚಾರ ಕೂಡ ಮಾಡಲಾಗುತ್ತದೆ. ಹೆಸರು ಬಿಟ್ಟು ಹೋಗಿದ್ದರೆ ಮಾತ್ರ ಸಂಬಂಧಪಟ್ಟ 11 ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕೆ ಹೊರತು ಹೆಸರು ಇದ್ದವರು ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾದ ಅಗತ್ಯ ಇರುವುದಿಲ್ಲ ಎಂದು ಅವರು ತಿಳಿಸಿದರು.
ಫಾರ್ಮ್ ಸಲ್ಲಿಸಿಯೂ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಅವರು ತಮ್ಮಲ್ಲಿರುವ ಇನ್ನೊಂದು ಪ್ರತಿ ಯೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಸರಿನಲ್ಲಿ ವ್ಯಾತ್ಯಾಸ ಇದ್ದವರಿಗೆ ನಾವೇ ನೋಟೀಸ್ ನೀಡುತ್ತೇವೆ. ಅವರು ತಮ್ಮ ಪ್ರಸ್ತುತ ಹೆಸರು ಬದಲಾಗಿರುವುದಕ್ಕೆ ಸಂಬಂಧಿಸಿ ದಾಖಲೆಯನ್ನು ಸಲ್ಲಿಸಬೇಕು. ಕರಡು ಪಟ್ಟಿಯಲ್ಲಿ ಇದ್ದವರ ಹೆಸರು ಯಾವುದೇ ಕಾರಣಕ್ಕೂ ಅಂತಿಮ ಪಟ್ಟಿಯಲ್ಲಿ ಬಿಟ್ಟು ಹೋಗುವುದಿಲ್ಲ. ಅ.7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಆಧಾರ್ ದಾಖಲೆ ಅಲ್ಲ: ಆಧಾರ ಕಾರ್ಡ್ ವೈಯಕ್ತಿಕ ಗುರುತೇ ಹೊರತು ಆ ವ್ಯಕ್ತಿ ಇಲ್ಲಿಯ ನಿವಾಸಿ ಎಂಬುದಕ್ಕೆ ಅಲ್ಲ. ಹಾಗಾಗಿ ಇದಕ್ಕೆ ಆಧಾರ್ ಕಾರ್ಡ್‌ನ್ನು ದಾಖಲೆಯಾಗಿ ಪಡೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಬಾರಿಯ ಮತದಾರ ಪಟ್ಟಿಯಲ್ಲಿ ಕೇವಲ 18ವರ್ಷ ತುಂಬಿದ ಹೊಸ ಮತದಾರರು ಮಾತ್ರ ಸೇರ್ಪಡೆ ಆಗು ತ್ತಾರೆ. ಅದಕ್ಕಿಂತ ಮೇಲ್ಪಟ್ಟವರು ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅವರಿಗೆ ಈಗ ಸೇರ್ಪಡೆಗೆ ಅವಕಾಶ ಇಲ್ಲ. ಜನವರಿ ತಿಂಗಳಲ್ಲಿ ಅದಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಫಾರ್ಮ್‌ಗೆ ಸಂಬಂಧಿಸಿ ಗೊಂದಲದಲ್ಲಿ ನಿವಾರಿಸಲು ಹಾಗೂ ಸಹಾಯ ಮಾಡಲು ತಾಲೂಕು ಮಟ್ಟದಲ್ಲಿ ಅಧಿಕಾರಿ ಗಳನ್ನು ನೇಮಕ ಮಾಡಲಾಗಿದೆ. ಬೂತ್‌ನಲ್ಲಿಯೇ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಇವರು ರವಿವಾರ ಕೂಡ ಕಾರ್ಯ ನಿರ್ವಹಿಸುತ್ತಾರೆ. ಬಿಎಲ್‌ಓಗಳ ಬಗ್ಗೆ ದೂರುಗಳಿದ್ದರೆ ಸೆಕ್ಟರ್ ಅಧಿಕಾರಿಗಳು ಅಥವಾ ತಹಶೀಲ್ದಾರ್‌ಗೆ ದೂರವಾಣಿ ಕರೆ ಮಾಡಿ ಕೂಡ ತಿಳಿಸಬಹುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಘದ ‘ಸನ್ಮತಿ’ ಪತ್ರಿಕೆಯ ಜೂನ್ ತಿಂಗಳ ಸಂಚಿಕೆ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ಸಂಘದ ಜಿಲ್ಲಾ ಕೋಶಾಧಿಕಾರಿ ಹರೀಶ್ ಕುಂದರ್, ಪತ್ರಿಕಾ ಭವನ ಸಮಿತಿಯ ಸಹಸಂಚಾಲಕ ಗಣೇಶ್ ಕಲ್ಯಾಣಪುರ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.
‘ಇಂಗ್ಲಿಷ್‌ನಲ್ಲೂ ಭರ್ತಿ ಮಾಡಬಹುದು’
ಎನ್ಯುಮರೇಷನ್ ಫಾರ್ಮ್‌ನ್ನು ಇಂಗ್ಲಿಷ್ ಅಥವಾ ಕನ್ನಡ ಭಾಷೆಯಲ್ಲಿ ಭರ್ತಿ ಮಾಡಬಹುದು. ಈ ಫಾರ್ಮ್‌ನ ಮೂಲ ಪ್ರತಿ ಇಂಗ್ಲಿಷ್‌ನಲ್ಲಿಯೇ ಇರುವುದು. ಹಾಗಾಗಿ ಇಂಗ್ಲಿಷ್‌ನಲ್ಲಿ ಭರ್ತಿ ಮಾಡಿದರೂ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸ್ಪಷ್ಟಪಡಿಸಿದರು.
ವಸತಿ ಸಮುಚ್ಛಯದಲ್ಲಿರುವ ಎಲ್ಲ ಫ್ಲ್ಯಾಟ್‌ಗಳಿಗೆ ಬಿಎಲ್‌ಓಗಳು ಬೇಟಿ ನೀಡಿಯೇ ಪಾರ್ಮ್ ವಿತರಿಸಬೇಕು. ಅದು ಬಿಟ್ಟು ಕೆಳಗಡೆ ಒಂದೇ ಕಡೆ ಇಟ್ಟು ವಿತರಿಸಲು ಅವಕಾಶ ಇಲ್ಲ. ಈ ಸಂಬಂಧ ಬಿಲ್ಡರ್ಸ್ ಸಂಘಟನೆಗಳ ಜೊತೆಗೂ ಸಭೆ ನಡೆಸಲಾಗಿದೆ. ಆ ರೀತಿ ಅವಕಾಶ ನೀಡದ ವಸತಿ ಸಮುಚ್ಛಯದ ಬಗ್ಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಸರು ಬಿಟ್ಟು ಹೋಗಲು ಎರಡೇ ಕಾರಣ!
ಫಾರ್ಮ್ ಭರ್ತಿ ಮಾಡಿ ವಾಪಾಸ್ಸು ನೀಡದವರು ಮತ್ತು ನೀಡಿದ ಫಾರ್ಮ್‌ನ್ನು ಬಿಎಲ್‌ಓಗಳು ಅಪ್‌ಲೋಡ್ ಮಾಡದಿರುವರರ ಹೆಸರು ಮಾತ್ರ ಕರಡು ಪ್ರತಿಯಲ್ಲಿ ಬಿಟ್ಟು ಹೋಗುತ್ತದೆ. ಅದು ಬಿಟ್ಟು ಬೇರೆ ಯಾವುದೇ ಕಾರಣಕ್ಕೂ ಹೆಸರು ಬಿಟ್ಟು ಹೋಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮ್ಯಾಪಿಂಗ್ ಆಗಿಲ್ಲ ಎಂಬ ಕಾರಣಕ್ಕೆ ಕರಡು ಪ್ರತಿಯಲ್ಲಿ ಹೆಸರು ಬಿಟ್ಟು ಹೋಗಲ್ಲ. ಮ್ಯಾಪಿಂಗ್‌ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಬಿಎಲ್‌ಓನಿಂದಾಗಿ ಕರಡುಪ್ರತಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ತಮ್ಮ ಕೈಯಲ್ಲಿರುವ ಇನ್ನೊಂದು ಪ್ರತಿಯನ್ನು ಸಲ್ಲಿಸಿ ದೂರು ನೀಡಬಹುದಾಗಿದೆ. ಯಾರ ಹೆಸರನ್ನು ಕೈಬಿಡಲು ಅಧಿಕಾರಿಗಳಿಗೆ ಅವಕಾಶ ಇಲ್ಲ ಎಂದು ಅವರು ಹೇಳಿದರು.
‘ಈ ಹಿಂದೆ ಎಲ್ಲ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೊಸ ಹೆಸರು ಸೇರ್ಪಡೆ ಮಾಡುವುದು ಮತ್ತು ಇಲ್ಲದವರನ್ನು ಡಿಲೀಟ್ ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು. ಡಿಲೀಟ್ ಆದವರ ಹೆಸರು ಪಟ್ಟಿಯಲ್ಲಿ ಇರುತ್ತಿತ್ತು. ಆದರೆ ಅದ ಎದುರಿಗೆ ಡಿಲೀಟ್ ಎಂಬುದಾಗಿ ಸೀಲ್ ಹಾಕಲಾಗಿತ್ತು. ಆದರೆ ಈಗ ನಾವು ಮತದಾರರ ಪಟ್ಟಿಯನ್ನೇ ಹೊಸದಾಗಿ ಮಾಡುತ್ತಿದ್ದೇವೆ. ಇಲ್ಲಿ ಡಿಲೀಟ್ ಆದವರ ಹೆಸರು ಕೂಡ ಪಟ್ಟಿಯಿಂದಲೇ ಹೋಗಿರುತ್ತದೆ. ಡಿಲೀಟ್ ಸೀಲ್ ಇರುವವರು ಯಾರು ಕೂಡ ಪಟ್ಟಿಯಲ್ಲಿ ಇರುವುದಿಲ್ಲ’
-ಸ್ವರೂಪಾ ಟಿ.ಕೆ., ಜಿಲ್ಲಾಧಿಕಾರಿ ಉಡುಪಿ






