ಸೆ.15ರಿಂದ ಚಿತ್ರಕಲಾ ಪ್ರದರ್ಶನ ‘ಮಾರುತ ಪ್ರಿಯ’

ಉಡುಪಿ, ಸೆ.14: ಭಾವನಾ ಪೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜನೆಯಲ್ಲಿ ಕಲಾವಿದರಾದ ಜನಾರ್ದನ ಹಾವಂಜೆ ಹಾಗೂ ಸಂತೋಷ್ ಪೈ ಅವರ ಗಣೇಶ ಹಾಗೂ ಕೃಷ್ಣನಿಗೆ ಸಂಬಂಧಿಸಿದ ಕಲಾಕೃತಿಗಳ ಚಿತ್ರಕಲಾ ಪ್ರದರ್ಶನ ‘ಮಾರುತಪ್ರಿಯ’ ಶೀರ್ಷಿಕೆಯಡಿಯಲ್ಲಿ ಸೆ.15ರಿಂದ 24ರವರೆಗೆ ಅಪರಾಹ್ನ 3ರಿಂದ ಸಂಜೆ 7ರ ತನಕ ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಗ್ಯಾಲರಿಯಲ್ಲಿ ನಡೆಯಲಿದೆ.
ಗಣಪತಿ ಹಾಗೂ ಕೃಷ್ಣನ ಬಗೆಗಿನ ಅನುಭವಗಳನ್ನು ಕಲಾಸಕ್ತರಿಗೆ ಹಂಚುವ ಕಲಾಪ್ರದರ್ಶನ ಇದಾಗಿದ್ದು, ಸುಮಾರು 18 ಕಾವಿ ಕಲೆಯ ಕಲಾಕೃತಿಗಳೂ, 12ಛಾಯಾಚಿತ್ರಗಳೂ ಇಲ್ಲಿ ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೇ ಬಹುಶಿಸ್ತೀಯ ಅನುಭವಗಳನ್ನು ಪಡೆಯಲು ಸೆ.16ರಶನಿವಾರ ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್ಟರೊಂದಿಗೆ ಹಾಗೂ 20ರ ಬುಧವಾರ ಸಂಜೆ 5ಕ್ಕೆ ನಾಡೋಜ ಕೆ.ಪಿ.ರಾವ್ ಅವರೊಂದಿಗೆ ಚಿಂತನ- ಮಂಥನ ಕಾರ್ಯಕ್ರಮ ನಡೆಯಲಿದೆ.
ಸೆ.18ರ ಸೋಮವಾರದಂದು ಸಂಜೆ 6:00ಕ್ಕೆ ಯಕ್ಷಗುರು ಹಾವಂಜೆ ಮಂಜುನಾಥಯ್ಯ ಹಾಗೂ ವಿದುಷಿ ಅಕ್ಷತಾ ವಿಶು ರಾವ್‌ರಿಂದ ಭೂ-ಕೈಲಾಸ ವಾಚನ- ಪ್ರವಚನ ಹಾಗೂ ಸೆ.21ರ ಗುರುವಾರ ಸಂಜೆ 5ಕ್ಕೆ ಹಾವಂಜೆ ಶ್ರೀಮಹಾಲಿಂಗೇಶ್ವರ ಯಕ್ಷರಂಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶಮಂತಕೋಪಾಖ್ಯಾನ ತಾಳಮದ್ದಳೆ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಆರ್ಟಿಸ್ಟ್ಸ್ ಫೋರಂ ಉಡುಪಿ ಇವರ ಸಹಕಾರದಿಂದ ಸಂಯೋಜಿಸಲಾಗಿದೆ ಎಂದು ಕಲಾವಿದ ಜನಾರ್ದನ ಹಾವಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







