ಉಡುಪಿ ಶ್ರೀಕೃಷ್ಣ ಮಠದ ಬಳಿ ತೆಲಂಗಾಣದ ಕುಟುಂಬದ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಂಧನ

ಉಡುಪಿ, ಜೂ.10: ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ತೆಲಂಗಾಣದ ಕುಟುಂಬದ ಮೇಲೆ ಕೋಲಿನಿಂದ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕೊರಂಗ್ರಪಾಡಿಯ ಸುಪ್ರೀತ್ ಕುಮಾರ್(40) ಬಂಧಿತ ಆರೋಪಿ. ಜೂ.9ರಂದು ಸಂಜೆ 7:50ರ ಸುಮಾರಿಗೆ ತೆಲಂಗಾಣ ರಾಜ್ಯದ ಹೈದರಾಬಾದಿನ ರಂಗರಾವ್ ಎಂಬವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು, ಕಾರು ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ದೇವಾಸ್ಥಾನಕ್ಕೆ ದರ್ಶನ ಮಾಡಲು ರಸ್ತೆ ದಾಟುತಿದ್ದರು. ಆಗ ಒಮ್ಮಲೇ ಕಾರನ್ನು ಜೋರಾಗಿ ಚಲಾಯಿಸಿಕೊಂಡು ಬಂದ ಸುಪ್ರೀತ್, ರಸ್ತೆ ದಾಟುತ್ತಿದ್ದ ರಂಗರಾವ್ ಹಾಗೂ ಅವರ ಕುಟುಂಬದವರ ಮೇಲೆ ಕಾರನ್ನು ಹಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಆಗ ರಂಗ ರಾವ್ ಚಾಲಕನಿಗೆ ನಿಧಾನವಾಗಿ ಬರುವಂತೆ ಹೇಳಿದಾಗ ಆತ ‘ನಾನು ಇಲ್ಲಿಯ ಸ್ಥಳೀಯ ವ್ಯಕ್ತಿ, ನನ್ನ ಕಾರಿಗೆ ಯಾವುದೇ ಹಾರ್ನ್ ಮತ್ತು ಬ್ರೇಕ್ ಇಲ್ಲ, ನಾನು ಇದೇ ರೀತಿ ಕಾರು ಚಾಲನೆ ಮಾಡುವುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಬಳಿಕ ಕಾರಿನಲ್ಲಿದ್ದ ಕೋಲನ್ನು ತಂದು ರಂಗ ರಾವ್ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ರಂಗ ರಾವ್ ತಲೆಗೆ ಗಾಯವಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿದೂರು: ಸುಪ್ರೀತ್ ಕುಮಾರ್ ತನ್ನ ಹೆಂಡತಿ ಮತ್ತು ಮಗು ವಿನೊಂದಿಗೆ ಕಾರಿನಲ್ಲಿ ಕಲ್ಸಂಕ-ರಾಜಾಂಗಣ ಮಾರ್ಗವಾಗಿ ರಾಜಾಂಗಣ ಪಾರ್ಕಿಂಗ್ ಬದಿಯ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದು, ಆಗ ತೆಲಂಗಾಣದ ಕಾರಿನ ಚಾಲಕ ಸುಪ್ರೀತ್ ಅವರ ಕಾರಿಗೆ ಢಿಕ್ಕಿ ಹೊಡೆಯಲು ಬಂದರೆನ್ನಲಾಗಿದೆ.
ಈ ವೇಳೆ ಸುಪ್ರೀತ್ ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರನ್ನು ಪ್ರಶ್ನಿಸಿದಾಗ ಅವರೆಲ್ಲ ಕಾರಿನಿಂದ ಕೆಳಗಿಳಿದು ಅಲ್ಲೇ ಇದ್ದ ಫೋಟೋ ಸ್ಟಾಂಡ್ ಮತ್ತು ಕುರ್ಚಿಗಳಿಂದ ಹಲ್ಲೆ ನಡೆಸಲು ಪ್ರಾರಂಭಿಸಿದರು. ಇದೇ ವೇಳೆ ಸುಪ್ರೀತ್ ಅವರ ಪತ್ನಿಯ ಮೇಲೆ ಕೂಡ ಹಲ್ಲೆ ನಡೆಸಿ ಕಾರಿನ ಕನ್ನಡಿಯನ್ನು ಒಡೆದಿರುವುದಾಗಿ ದೂರಲಾಗಿದೆ. ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ಸುಪ್ರೀತ್ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.
ಈ ಎರಡೂ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದ ಪೊಲೀಸರು, ರಂಗರಾವ್ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪಿ ಸುಪ್ರೀತ್ ಕುಮಾರ್‌ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






