ಮೀನುಗಾರಿಕೆಗೆ ಪ್ರವಾಸೋದ್ಯಮ ಅಭಿವೃದ್ಧಿ ಧಕ್ಕೆಯಾಗದಂತೆ ಎಚ್ಚರಿಕೆ: ಮೀನುಗಾರರಿಗೆ ಸಚಿವ ಬಸವಂತಪ್ಪ ಭರವಸೆ

ಮಲ್ಪೆ, ಸೆ.16: ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವಾಗ ಮೀನುಗಾರಿಕಾ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗುವುದು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೆ.ಎಸ್ ಬಸವಂತಪ್ಪ ಜಿಲ್ಲೆಯ ಮೀನುಗಾರರಿಗೆ ಭರವಸೆ ನೀಡಿದ್ದಾರೆ.
ರಾಜ್ಯದ ನೂತನ ಮೀನುಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಬಸವಂತಪ್ಪ, ಮಲ್ಪೆಯ ಸರ್ವಋತು ಮೀನುಗಾರಿಕಾ ಬಂದರಿನೊಳಗೆ ಇರುವ ಮಲ್ಪೆ ಮೀನುಗಾರರ ಸಂಘದಲ್ಲಿ ಸಂಘದ ಪಧಾಧಿಕಾರಿಗಳನ್ನು ಭೇಟಿ ಮಾಡಿ, ಸಮಸ್ತ ಮೀನುಗಾರರ ಪರವಾಗಿ ಅರ್ಪಿಸಲಾದ ಮನವಿಯನ್ನು ಸ್ವೀಕರಿಸಿದ ಬಳಿಕ ಮಾತನಾಡುತಿದ್ದರು.
ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹದ ನೆಪದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಮೀನುಗಾರಿಕಾ ಉದ್ಯಮಕ್ಕೆ ಮಾರಕವಾಗುವ ಕೆಲವು ಬೆಳವಣಿಗೆ ಇತ್ತೀಚೆಗೆ ನಡೆಯುತಿದ್ದು, ಇದಕ್ಕೆ ಮೀನುಗಾರರ ಸಂಪೂರ್ಣ ವಿರೋಧವಿದೆ ಎಂದು ಸಂಘ ನೀಡಿದ ಮನವಿಯಲ್ಲಿ ಸಚಿವರ ಗಮನ ಸೆಳೆದಿತ್ತು.
ಮಲ್ಪೆ ಆಸುಪಾಸಿನ ಅಯ್ಬಾ, ದರಿಯಾ ಬಹಾದೂರ್‌ಘಡ ಹಾಗೂ ಮಲ್ಪೆ ದ್ವೀಪಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರಕಾರ ಬ್ಲ್ಯಾಕ್ ಬ್ರಿಕ್ಸ್ ಸಂಸ್ಥೆಯನ್ನು ಯೋಜನಾ ಸಲಹೆಗಾರರಾಗಿ ನೇಮಿಸಿರುವುದನ್ನು ಉಲ್ಲೇಖಿಸಿ ಈ ಮನವಿ ಮಾಡಲಾಗಿತ್ತು.
ಹೊರಬಂದರಿನ ಪ್ರಸ್ತಾಪ: ಮಲ್ಪೆ ಮೀನುಗಾರರ ಸಂಘವು ಬಂದರಿನ ಒಳಗೆ ವಿಸ್ತರಣೆಗೆ ಸ್ಥಳಾಭವವಿರುವುದರಿಂದ ಹೊರಬಂದರಿನ ಪ್ರಸ್ತಾಪನೆಯನ್ನು ಕಳೆದ 4-5 ವರ್ಷದಿಂದ ಸಲ್ಲಿಸುತಿದ್ದು, ಇದಕ್ಕಾಗಿ ಹೈದರಾಬಾದ್ ಮೂಲದ ಸಂಸ್ಥೆಯೊಂದು ಹೊರಬಂದರಿನ ವಿನ್ಯಾಸವನ್ನು ಸಿದ್ಧಪಡಿಸಿದ್ದು, ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಿರಿಯ ಸಚಿವರು, ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿಪಿಆರ್ ರಚಿಸಲು ನೀಡಲಾದ ಪ್ರಸ್ತಾವ ನೆಗೆ ಇದುವರೆಗೆ ಸರಕಾರ ಹಸಿರುನಿಶಾನೆ ತೋರಿಸಿಲ್ಲ ಎಂದು ಮನವಿಯಲ್ಲಿ ಸಚಿವರಿಗೆ ಮನವರಿಕೆ ಮಾಡಲಾಗಿದೆ.
ಬಂದರಿನ ಅಭಿವೃದ್ಧಿ ಆದ್ಯತೆ: ಮಲ್ಪೆ ಮೀನುಗಾರರ ಸಂಘದಿಂದ ಸನ್ಮಾನವನ್ನು ಸ್ವೀಕರಿಸಿ ಮೀನುಗಾರರನ್ನು ದ್ದೇಶಿಸಿ ಮಾತನಾಡಿದ ಸಚಿವ ಬಸವಂತಪ್ಪ, ಮಲ್ಪೆಯ ಸರ್ವಋತು ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಮೂಲಕ ಮೀನುಗಾರಿಕಾ ಚಟುವಟಿಕೆಗೆ ಪ್ರಥಮ ಪ್ರಾಶಸ್ತ್ಯ ಮಾಡಿಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಮಲ್ಪೆ ಮೀನುಗಾರಿಕಾ ಬಂದರು ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ಮೀನುಗಾರಿಕಾ ಬಂದರಾಗಿ ಗುರುತಿಸಿ ಕೊಂಡಿದೆ. ಇದರ ಆಧುನೀಕರಣಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರಿಕಾ ಉದ್ಯಮದ ಉನ್ನತೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಮುಖ್ಯಮಂತ್ರಿಗಳು ಕರಾವಳಿ ಭಾಗದ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿದ್ದು, ಈ ನಿಟ್ಟಿನಲ್ಲಿ ಸೆ.18ರಂದು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಮಾಹಿತಿ ಪಡೆದು ಕರಾವಳಿ ಭಾಗದ ಮೀನುಗಾರಿಕಾ ಚಟುವಟಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಕಾಯಕಲ್ಪ ನೀಡಲು ಕಾತರರಾಗಿದ್ದಾರೆ ಎಂದರು.
ಜಿಲ್ಲೆಯ ಕರಾವಳಿ ಭಾಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದ್ದಲ್ಲಿ ಸ್ಥಳೀಯ ಮೀನುಗಾರರಿಗೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ತೊಂದರೆ ಉಂಟಾಗಲಿದೆ ಎಂಬ ಅಳಲು ಸ್ಥಳೀಯ ಮೀನುಗಾರರಿಂದ ಕೇಳಿ ಬಂದಿದ್ದು, ಮೀನುಗಾರರ ಆಶೋತ್ತರಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಮಾನದಂಡಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಅನಾದಿ ಕಾಲದಿಂದಲೂ ಕರಾವಳಿ ಭಾಗದಲ್ಲಿ ಲಕ್ಷಾಂತರ ಮೀನುಗಾರರು ಮೀನುಗಾರಿಕೆ ವೃತ್ತಿಯಿಂದ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ನಿರ್ಮಾಣಕ್ಕೆ 1.20 ಲಕ್ಷ ರೂ ಸಹಾಯಧನ ನೀಡುತ್ತಿದ್ದು, ಇದು ಮನೆಯ ಅಡಿಪಾಯಕ್ಕೆ ಸಾಲುವುದಿಲ್ಲ. ಈ ಅನುದಾನವನ್ನು ಕನಿಷ್ಠ 3ಲಕ್ಷಕ್ಕೆ ಹೆಚ್ಚಿಸಲು ಹಾಗೂ ಡೀಸೆಲ್‌ಗೆ ನೀಡುತ್ತಿರುವ ಸಹಾಯಧನವನ್ನು 300ರಿಂದ 500 ಲೀ.ಗೆ ಹೆಚ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ರೈತರಿಗೆ ನೀಡುವ ಸೌಲಭ್ಯ ಮೀನುಗಾರರಿಗೆ: ಉತ್ತರ ಕರ್ನಾಟಕ ಭಾಗದ ರೈತರ ಕೃಷಿಗೆ ನೀಡಲಾಗುತ್ತಿರುವ ಸಹಾಯಧನ, ಪರಿಹಾರ ನಿಧಿ, ಬೆಂಬಲ ಬೆಲೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕರಾವಳಿ ಭಾಗದ ಮೀನುಗಾರರಿಗೆ ನೀಡುವ ಮನವಿಗೆ ಸ್ಪಂಧಿಸಿ, ಈ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಮೀನುಗಾರರ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಭಾಗದಲ್ಲಿ ಸಿಆರ್‌ಝಡ್ ಸಮಸ್ಯೆಯಿಂದ ಮೀನುಗಾರರಿಗೆ ಯಾವುದೇ ಆರ್ಥಿಕ ಸಹಾಯಧನ ಪಡೆಯಲು ಆಗುತ್ತಿಲ್ಲ. ಕೃಷಿಗೆ ನೀಡುವ ಸವಲತ್ತುಗಳನ್ನು ಮೀನುಗಾರಿಕಾ ಚಟುವಟಿಕೆಗೂ ನೀಡಬೇಕು. ಮೀನುಗಾರಿಕೆ ತೆರಳಿದ ಸಂದರ್ಭದಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸಲು ಮಲ್ಪೆ ಭಾಗದಲ್ಲಿ ಸೀ- ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಈಗಿರುವ ಫಿಶರೀಸ್ ಶಾಲೆಗಳಿಗೆ ಹೊಸ ರೂಪ ನೀಡಿ ಅವುಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವರಲ್ಲಿ ಬೇಡಿಕೆ ಇಟ್ಟರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ಪ್ರಸಾದ್ ರಾಜ್ ಕಾಂಚನ್, ಮಲ್ಪೆ ಮೀನುಗಾರರ ಸಂಘದ ಉಪಾಧ್ಯಕ್ಷ ನಾಗರಾಜ ಕುಂದರ್, ಮಾಜಿ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಜಗನ್ನಾಥ ಸ್ವಾಗತಿಸಿದರು.






