ಟೋಲ್‌ಗೇಟ್‌ಗಳಲ್ಲಿ ಹಿಂದಿ ಭಾಷಿಕರ ದೌರ್ಜನ್ಯ: ಕರವೇ ಎಚ್ಚರಿಕೆ

ಉಡುಪಿ, ಫೆ.9: ಜಿಲ್ಲೆಯ ಟೋಲ್ ಗೇಟ್‌ಗಳಲ್ಲಿ ಉತ್ತರ ಭಾರತದ ಹಿಂದಿ ಭಾಷಿಕರಿಂದ ದೌರ್ಜನ್ಯ ಹೆಚ್ಚಾಗುತ್ತಿದ್ದು, ಕನ್ನಡಿಗರ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅನ್ಸಾರ್ ಅಹಮ್ಮದ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ದಿನಗಳ ಹಿಂದೆ ಸಾಸ್ತಾನ ಟೋಲ್‌ಗೇಟ್ ನಲ್ಲಿ ಮಾಜಿ ಸೈನಿಕರೊಬ್ಬರನ್ನು ಅವಮಾನಿಸಿದ ಘಟನೆ ನೆನಪಿನಿಂದ ಮಾಸುವ ಮೊದಲೇ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಶನಿವಾರ ಅವಮಾನಿಸಿದ್ದಾರೆ ಎಂದು ಅವರು ದೂರಿದರು.
ಜಿಲ್ಲೆಯಲ್ಲಿ ಹಿಂದಿ ಭಾಷಿಕರಿಂದ ಕನ್ನಡಿಗರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿದ್ದು, ಇಂಥ ಘಟನೆ ಪುನರಾವರ್ತನೆಗೊಂಡರೆ ಟೋಲ್‌ಗೇಟ್‌ಗೆ ಕರವೇ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಸಿ ಅವರು, ಟೋಲ್ ಗೇಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯ ರಾಜ್ಯದ ವರನ್ನು ತೆಗೆದು ಹಾಕಿ ಸ್ಥಳೀಯರನ್ನು ನೇಮಿಸಿಕೊಳ್ಳುವಂತೆ ಒತ್ತಾಯಿಸಿದರು.
ಕನ್ನಡಿಗರ ಮೇಲೆ ದೌರ್ಜನ್ಯ ತೋರಿಸುವುದಕ್ಕಾಗಿಯೇ ಅನ್ಯ ಭಾಷಿಕರನ್ನು ಟೋಲ್ ಗೇಟ್‌ಗಳಲ್ಲಿ ನೇಮಿಸಿದ್ದಾರೆಯೇ ಎನ್ನುವ ಸಂಶಯ ನಮ್ಮಲ್ಲಿ ಮೂಡುತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರಾದ ಸುಜಯ್ ಪೂಜಾರಿ, ಜ್ಯೋತಿ ಶೇರಿಗಾರ್ತಿ, ಸಯ್ಯದ್ ಇಝಾಜ್, ಸುಧೀರ್ ಪೂಜಾರಿ, ದೇವಕಿ ಬಾರ್ಕೂರು ಉಪಸ್ಥಿತರಿದ್ದರು.






