ಉಡುಪಿ ಡಿಸಿ ಕಚೇರಿ ಮುತ್ತಿಗೆಗೆ ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಉಡುಪಿ, ಸೆ.22: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಖಂಡಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ(ಟಿ. ನಾರಾಯಣಗೌಡ ಬಣ) ಉಡುಪಿ ಜಿಲ್ಲಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ರಾಜ್ಯದ ರೈತರ ಜೀವನದಿ ಕಾವೇರಿಯ ನೀರು ತಮಿಳುನಾಡಿಗೆ ಬಿಡದಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದ ಕರವೇ ಕಾರ್ಯಕರ್ತರನ್ನು ಜಿಲ್ಲಾಧಿಕಾರಿ ಕಛೇರಿಯ ಗೇಟ್ ಬಳಿಯೇ ಮಣಿಪಾಲ ಪೊಲೀಸರು ತಡೆ ದರು. ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರ ಬರಗಾಲವಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ, ಜನರಿಗೆ ಸಂಕಷ್ಟ ಎದುರಾಗಲಿದೆ. ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ಜನರ ಆಗ್ರಹವನ್ನು ಧಿಕ್ಕರಿಸಿ ನೀರು ಹರಿಸಿದರೆ, ಗಂಭೀರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಕರವೇ ಕಾರ್ಯಕರ್ತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಕಾರ್ಯಕರ್ತರಾದ ಸುಂದರ್ ಬಂಗೇರ, ಗೀತಾ ಪಾಂಗಾಳ, ಜಯ ಪೂಜಾರಿ, ಸಂತೋಷ ಕುಲಾಲ್, ದೇವಕಿ ಬಾರಕೂರು, ಸಿದ್ದಣ್ಣ ಎಸ್. ಪೂಜಾರಿ, ಕೃಷ್ಣ ಪಾಂಗಾಳ, ಜ್ಯೋತಿ, ಜ್ಯೋತಿ ಆರ್., ಎಸ್.ಆರ್.ಲೋಬೊ, ರಾಘವೇಂದ್ರ ನಾಯಕ್, ಪ್ರಮೋದ್ ಕುಲಾಲ್, ಜಯ ಸಾಲ್ಯಾನ್, ಸರಿತಾ ಹಾಜರಿದ್ದರು.







