ಆ.31ರ ಸೂಪರ್‌ಮೂನ್ ಅತ್ಯಂತ ಮಹತ್ವದ್ದು: ಡಾ.ಎ.ಪಿ.ಭಟ್

ಉಡುಪಿ, ಆ.30: ಈ ವರ್ಷದ 4 ಸೂಪರ್ ಮೂನ್‌ಗಳಲ್ಲಿ ಆ.31ರ ಸೂಪರ್‌ಮೂನ್ ಅತ್ಯಂತ ಹೆಚ್ಚಿನ ಮಹತ್ವದ್ದಾಗಿದೆ ಎಂದು ಭೌತಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉಡುಪಿ ತಿಳಿಸಿದ್ದಾರೆ.
ಈ ವರ್ಷದ ನಾಲ್ಕು ಸೂಪರ್‌ಮೂನ್‌ಗಳು ಜುಲೈ 3, ಆಗಸ್ಟ್ 1, ಆಗಸ್ಟ್31 ಹಾಗೂ ಸಪ್ಟಂಬರ್ 29ರಲ್ಲಿ ಗೋಚರಿಸುತ್ತದೆ. ಜು.3ರಂದು ಚಂದ್ರ, ಭೂಮಿ ಯಿಂದ 3,61800 ಕಿ.ಮೀ., ಆ.1ರಂದು 3,57530ಕಿ.ಮೀ., ಆ.31ರಂದು 3,57344 ಕಿ.ಮೀ. ಹಾಗೂ ಸೆ.29ರಂದು 3,61552 ಕಿ.ಮೀ. ದೂರದಲ್ಲಿ ರುತ್ತದೆ.
ಇವುಗಳಲ್ಲಿ ಶ್ರಾವಣದ ಈ ಹುಣ್ಣಿಮೆಯ ಚಂದ್ರನ ಸೂಪರ್ ಮೂನ್ ಹೆಚ್ಚಿನ ಪ್ರಭೆಯಿಂದ ಕೂಡಿರುತ್ತದೆ. ಕಾರಣ ಈ ನಾಲ್ಕರಲ್ಲಿ ಇದು ಭೂಮಿಗಿಂತ ಹೆಚ್ಚು ಸಮೀಪವಾಗಿರುತ್ತದೆ. ಆದುದರಿಂದ ಈ ಹುಣ್ಣಿಮೆ ಚಂದಿರ ಸುಮಾರು 14ಅಂಶ ದೊಡ್ಡದಾಗಿ ಕಾಣುತ್ತದೆ. ಅಂತೆಯೇ 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆಯಂದ ಕೂಡಿರುತ್ತದೆ.
ಇನ್ನೊಂದು ವಿಶೇಷ ಅಂದರೆ ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳು ಬರುತ್ತಿದ್ದು, ಅದರಲ್ಲೂ ಇವೆರಡೂ ಸೂಪರ್‌ಮೂನ್ ಆಗಿದೆ. ಇವೆಲ್ಲವೂ ಭಾರತೀಯರು ಖುಷಿಪಡಲು ಪೂರಕವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





