ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ : ಕೇರಳ-ಗುಜರಾತ್ ರಾಷ್ಟ್ರೀಯ ಬೈಕ್ ರ್ಯಾಲಿಗೆ ಉಡುಪಿಯಲ್ಲಿ ಸ್ವಾಗತ

ಉಡುಪಿ : ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ‘ಮಾದಕ ದ್ರವ್ಯಗಳ ವಿರುದ್ಧ ಹೋರಾಟ’ ಎಂಬ ಸಂದೇಶದೊಂದಿಗೆ ಕೇರಳ, ಲಕ್ಷದ್ವೀಪದಿಂದ ಗುಜರಾತ್ನ ಏಕತಾ ನಗರಕ್ಕೆ ತೆರಳಲಿರುವ ಕೇರಳ ಪೊಲೀಸರ ರಾಷ್ಟ್ರೀಯ ಮೋಟಾರ್ ಸೈಕಲ್ ರ್ಯಾಲಿಗೆ ಸ್ವಾಗತ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಉಡುಪಿ ನಗರದ ಕ್ಲಾಕ್ ಟವರ್ ಬಳಿ ರವಿವಾರ ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ಮಾದಕ ವಸ್ತುಗಳನ್ನು ಯಾರಾದರೂ ಬಳಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು. ತಮ್ಮ ಸ್ನೇಹಿತರು ಆ ಜಾಲಕ್ಕೆ ಬಲಿಯಾಗುತ್ತಿದ್ದರೆ ಅವರಿಗೆ ಸೂಕ್ತ ಕೌನ್ಸಿಲಿಂಗ್ ನೀಡಿ ಅದರಿಂದ ಹೊರ ತರುವ ಕಾರ್ಯ ಮಾಡಬೇಕು. ಅಲ್ಲದೆ ಡ್ರಗ್ಸ್ ಸೇವನೆಯಿಂದ ಆಗುವ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ನಾವೆಲ್ಲ ಒಗ್ಗಟ್ಟಾಗಿ ಡ್ರಗ್ಸ್ ವಿರುದ್ಧ ಹೋರಾಟ ಮಾಡಬೇಕಾಗಿದೆ. ಈ ಸಂಬಂಧ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದೆ. ಮಾದಕ ದ್ರವ್ಯಗಳು ಹೊರದೇಶದಿಂದ ನಮ್ಮ ದೇಶಕ್ಕೆ ಬರುತ್ತದೆ. ಈ ಮೂಲಕ ನಮ್ಮ ಯುವಜನತೆಯನ್ನು ತಪ್ಪು ದಾರಿಗೆ ಇಳಿಯುವಂತೆ ಮಾಡುವುದೇ ಈ ಜಾಲದ ಕುತಂತ್ರವಾಗಿದೆ. ಆ ದೇಶ ವಿರೋಧಿ ಚಟುವಟಿಕೆ ವಿರುದ್ಧ ನಾವೆಲ್ಲ ಒಂದಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಕೇರಳ ಪೊಲೀಸ್ ಅಧಿಕಾರಿ ಅಶ್ವಿನ್ ರಾಯ್, ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಿದರು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಪ್ರೇಮ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಾಡೂರು, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.
ಬಳಿಕ ಗೋಕರ್ಣ, ಪಣಜಿ ಮಾರ್ಗವಾಗಿ ಗುಜರಾತ್ಗೆ ಮುಂದುವರೆದ ಬೈಕ್ ರ್ಯಾಲಿಗೆ ಗಣ್ಯರು ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.






